ಹೊಸಪೇಟೆ (ವಿಜಯನಗರ): ನಗರದ ಹೊರವಲಯದ ಟಿ.ಬಿ.ಡ್ಯಾಂ ಸಮೀಪದ ಬೆಂಗಳೂರು–ಕೊಪ್ಪಳ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಆರ್‌ಟಿಒ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಟ್ರಕ್ ಚಾಲಕರೊಬ್ಬರು ಮೃತಪಟ್ಟಿದ್ದು, ಘಟನೆ ಖಂಡಿಸಿ ಹತ್ತಾರು ಟ್ರಕ್ ಚಾಲಕರು ಸ್ವಲ್ಪ ಹೊತ್ತು ಹೆದ್ದಾರಿ ತಡೆದು ಪ್ರತಿಭಟಿಸಿದರು.
ಆರ್‌ಟಿಒ ಅಧಿಕಾರಿಗಳಿಂದ ವಾಹನ ನಿಲ್ಲಿಸಲು ಸೂಚನೆ ಸಿಕ್ಕಿದ ತಕ್ಷಣ ಟ್ರಕ್ ಚಾಲಕ ತಮ್ಮ ಟ್ರಕ್ ನಿಲ್ಲಿಸಿ ದಾಖಲೆ ಪತ್ರ ತೋರಿಸಿ ವಾಪಸ್ ರಸ್ತೆ ದಾಟಲು ಯತ್ನಿಸಿದ್ದಾಗ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆಯಿತು. ಅವರು ಸ್ಥಳದಲ್ಲೇ ಮೃಪಟ್ಟರು.
‘ಆರ್‌ಟಿಒ ಅಧಿಕಾರಿಗಳು ವಸೂಲಿಗೆ ಇಳಿದಿದ್ದಾರೆ, ಅವರಿಗೆ ಲಂಚ ಕೊಟ್ಟು ಬರುವಾಗಲೇ ಈ ಅಪಘಾತ ಸಂಭವಿಸಿದೆ. ಹೀಗಾಗಿ ಈ ಅಪಘಾತಕ್ಕೆ ಆರ್‌ಟಿಒ ಅಧಿಕಾರಿಗಳೇ ಹೊಣೆ’ ಎಂದು ಆರೋಪಿಸಿದ ಟ್ರಕ್ ಚಾಲಕರು ದಿಢೀರನೆ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ತಮ್ಮ ಟ್ರಕ್‌ಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದರು. ಇದರಿಂದ ಚಿತ್ರದುರ್ಗ–ಕೊಪ್ಪಳ ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.
ಆರ್‌ಟಿಒ ಅಧಿಕಾರಿಗಳಿಂದ ವಾಹನ ತಪಾಸಣೆ ಸಹಜವಾಗಿ ನಡೆಯುತ್ತಿರುತ್ತದೆ. ಹೆದ್ದಾರಿ ದಾಟುವಾಗ ಎಚ್ಚರಿಕೆ ವಹಿಸಬೇಕು. ಮೃತ ಟ್ರಕ್ ಚಾಲಕನ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಚಾಲಕ ತನ್ನ ದಾಖಲೆ ಪತ್ರಗಳನ್ನು ತೋರಿಸಿ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ ಎಂಬ ಮಾಹಿತಿ ನನಗೆ ದೊರೆತಿದೆ. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.