ಹಂಪಿ (ವಿಜಯನಗರ): ಬಲಭೀಮರಂತೆ ಗುಂಡುಕಲ್ಲಿನ ಜೊತೆ ಸೆಣೆಸಾಡಿದ ಜಗಜಟ್ಟಿಗಳು ಮೈ ಬಗ್ಗಿಸಿ ನೋಡ ನೋಡುತ್ತಿದ್ದಂತೆ ಕಲ್ಲು ಗುಂಡು ಎತ್ತುವ ಪರಿ ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿತು. ಒಬ್ಬೊಬ್ಬ ಜಟ್ಟಿಯೂ ಮೈ ಹುರಿಗೊಳಿಸಿಕೊಂಡು ಭಾರ ಎತ್ತುತ್ತಿದ್ದಂತೆ ಕೇಕೆ ಹಾಕಿ, ಕರತಾಡನ ಮೂಲಕ ಹುರಿದುಂಬಿಸುತ್ತಿದ್ದರು.
ಹಂಪಿ ಉತ್ಸವದ ಅಂಗವಾಗಿ ಹೊಸಮಲಪನಗುಡಿ ವಿದ್ಯಾರಣ್ಯ ಪೀಠ ಪ್ರೌಢ ಶಾಲೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಗುಂಡು ಎತ್ತುವ ಸ್ಪರ್ಧೆಯಲ್ಲಿ ಕಂಡುಬಂದು ದೃಶ್ಯಗಳಿವು.
175, 155 ಮತ್ತು 135 ಕೆ.ಜಿ ಗುಂಡು ಎತ್ತುವ ಸ್ಪರ್ಧೆಗೆ ಸುಮಾರು 10 ಜನರು ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಸೆಣಸಾಡಿ ಅಂತಿಮವಾಗಿ 155 ಕೆ.ಜಿ ಸ್ಪರ್ಧೆಯಲ್ಲಿ ವಿಜಯಪುರದ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಹಳ್ಳೂರು ಗ್ರಾಮದ ಯಳವಾರ್ ಶೇಖಪ್ಪ ಪ್ರಥಮ ಸ್ಥಾನದೊಂದಿಗೆ ₹10,000 ಬಹುಮಾನ, ಮರಿಯಮ್ಮನಹಳ್ಳಿ ಗಂಗಾಧರ ದ್ವಿತೀಯ ಸ್ಥಾನ ₹5,000 ಮತ್ತು ಸೀಗೇನಹಳ್ಳಿ ಚಂದ್ರಪ್ಪ ತೃತೀಯ ಸ್ಥಾನ ಪಡೆದು ₹3,000 ಕ್ರಮವಾಗಿ ಪ್ರಮಾಣಪತ್ರ ಪಡೆದರು.
175ಕೆ.ಜಿ ಗುಂಡು ಎತ್ತಲು ಕೆಲ ಜಟ್ಟಿಗಳು ಪ್ರಯತ್ನಿಸಿದರಾದರು ಅವರ ಆಸೆ ಈಡೇರಲಿಲ್ಲ.
ಪ್ರಸ್ತುತ ಗ್ರಾಮೀಣ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಎಚ್.ಆರ್. ಗವಿಯಪ್ಪ ಜಯಗಳಿಸಿದವರಿಗೆ ವೈಯಕ್ತಿಕವಾಗಿ ನಗದು ನೀಡುವುದಾಗಿ ತಿಳಿಸಿದರು.
ಬಂಡಿ ಗಾಲಿ ಕಳಚಿ ಜೋಡಿಸುವ ದೇಶಿ ಸ್ಪರ್ಧೆ ಮಧ್ಯಾಹ್ನದ ನೆತ್ತರು ಸುಡುವ ಬಿಸಿಲಿನಲ್ಲಿ ನಡೆದರೂ ನೆರೆದಿದ್ದವರ ಉತ್ಸಾಹಕ್ಕೇನೂ ಕೊರತೆ ಇರಲಿಲ್ಲ.
ಸ್ಪರ್ಧೆಗೆ ಮುನ್ನ ಮಂತ್ರಮುಗ್ದರಾಗಿ ಕುಳಿತಿದ್ದ ಜನರು ಸ್ಪರ್ಧಿಗಳು ಬಂಡಿ ಗಾಲಿ ಕಳಚಿ ಮತ್ತೆ ಜೋಡಿಸಿ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹಿಸುತ್ತಿದ್ದರು.
ಈ ಸ್ಪರ್ಧೆಯಲ್ಲಿ ಐದು ಜನರು ಹೆಸರು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ ಬಾಣದ ಕೆರೆ ಕಣಿಮೆಪ್ಪ ಪ್ರಥಮ ಸ್ಥಾನದೊಂದಿಗೆ ₹10,000, ಯಂಕೋಬ ಬಾಣದಕೆರೆ ದ್ವಿತೀಯ ₹ 5,000 ಮತ್ತು ಮಾರುತಿ ಮ್ಯಾಸಕೇರಿ ತೃತೀಯ ಸ್ಥಾನದೊಂದಿಗೆ ₹ 3.000ಬಹುಮಾನ ಗಳಿಸಿದರು.
ಇವರಿಗೆ ತರಬೇತಿ ನೀಡಿದ್ದ ಅಸುಂಡಿ ಯಂಕೋಬಪ್ಪ, ಪರಸಪ್ಪ ಗೆಂಡೆ, ಜಿಲ್ಲಾಡಳಿತ ಅಧಿಕಾರಿಗಳು, ತೀರ್ಪುಗಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.