ADVERTISEMENT

ಹೊಸಪೇಟೆ | ಯುಜಿಸಿ–ನೆಟ್‌ ಅಕ್ರಮ: ಎಐಡಿಎಸ್‌ಒ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:16 IST
Last Updated 24 ಜೂನ್ 2024, 16:16 IST
ಯುಜಿಸಿ–ನೆಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ವಿರೋಧಿಸಿ ಹೊಸಪೇಟೆಯಲ್ಲಿ ಎಐಡಿವೈಒ, ಎಐಡಿಎಸ್‌ಒ ಸಂಘಟನೆಗಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು
ಯುಜಿಸಿ–ನೆಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ವಿರೋಧಿಸಿ ಹೊಸಪೇಟೆಯಲ್ಲಿ ಎಐಡಿವೈಒ, ಎಐಡಿಎಸ್‌ಒ ಸಂಘಟನೆಗಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು   

ಹೊಸಪೇಟೆ (ವಿಜಯನಗರ): ಯುಜಿಸಿ-ನೆಟ್ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಭಾಗವಹಿಸಿದವರನ್ನು ತಕ್ಷಣವೇ ಬಂಧಿಸುವಂತೆ ಹಾಗೂ ಪರೀಕ್ಷೆ ನಡೆಸುವ ನ್ಯಾಷನಲ್ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ಇಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್‌ ಆರ್ಗನೈಸೇಷನ್ (ಎಐಡಿಎಸ್‌ಒ)  ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ಎಐಡಿವೈಒನ ರಾಜ್ಯ ಸಮಿತಿ ಸದಸ್ಯ ಜಗದೀಶ್ ಮಾತನಾಡಿ, ‘ಜೂನ್ 18ರಂದು ಎನ್‍ಟಿಎ ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಆದರೆ ಇದರಿಂದ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ’ ಎಂದು ಆರೋಪಿಸಿದರು.

‘ಈ ವರ್ಷದಿಂದ ಪಿಎಚ್‌.ಡಿ ಪ್ರವೇಶಕ್ಕೂ ನೆಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ ಮಾಡಿದ್ದರಿಂದಾಗಿ ಪಿಎಚ್‌.ಡಿ ಪ್ರವೇಶಕ್ಕಾಗಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯುವುದಕ್ಕಾಗಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಇದರಿಂದ  ಭ್ರಷ್ಟಾಚಾರ ನಡೆದಿದೆ. ವೈದ್ಯಕೀಯ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಯಾದ ನೀಟ್‌,  ನೀಟಾಗಿ ನಡೆಯಲಿಲ್ಲ, ನೆಟ್ ನೆಟ್ಟಗಾಗಲಿಲ್ಲ ಎಂದು ವ್ಯಂಗ್ಯವಾಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ADVERTISEMENT

ಎಐಡಿಎಸ್‍ಒ ವಿಜಯನಗರ ಜಿಲ್ಲಾ ಸಮಿತಿ ಸದಸ್ಯರಾದ ಶಾಂತಿ ಎ. ಮಾತನಾಡಿ, ‘ಅಕ್ರಮಗಳ ಸರಮಾಲೆ, ದುಡ್ಡಿದ್ದವರಿಗೆ ಉದ್ಯೋಗ, ದುಡ್ಡಿದ್ದವರಿಗೆ ಶಿಕ್ಷಣ ಎನ್ನುವ ವಾತಾವರಣವನ್ನು ಸೃಷ್ಟಿಸಿವೆ. ಜನಸಾಮಾನ್ಯರ ಬದುಕನ್ನು ಬೀದಿಗೆ ತಳ್ಳಿವೆ. ಲಕ್ಷಾಂತರ ಪರೀಕ್ಷಾರ್ಥಿಗಳ ಶ್ರಮವನ್ನು ಹಾಳು ಮಾಡಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಉಗ್ರ ಶಿಕ್ಷೆ ನೀಡಬೇಕು’  ಎಂದು ಆಗ್ರಹಿಸಿದರು.

ತಹಶೀಲ್ದಾರ್ ಮೂಲಕ ಪ್ರಧಾನಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು. ಶಿವು ಚಿತ್ತವಾಡಗಿ, ಸಂದೀಪ್, ದೊಡ್ಡಬಸವ, ಮಹೇಶ್,  ವೀರೂಪಾಕ್ಷ, ಸಿದ್ದಪ್ಪ, ಪ್ರಮೋದ್, ಮನೋಜ್, ರಮೇಶ್, ಪ್ರೇಮಾ, ಕೀರ್ತಿ, ಪಾಲಾಕ್ಷ ಹಡಗಲಿ, ಅಜಯ್ ಬೊಮ್ಮಗಟ್ಟ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.