ಹೊಸಪೇಟೆ (ವಿಜಯನಗರ): ಹೊಸಪೇಟೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವ ಸಾವಿರಾರು ಮಂದಿಗೆ ಒಂದು ಸಣ್ಣ ಆಶಾಕಿರಣ ಗೋಚರಿಸಿದ್ದು, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ತಾಲ್ಲೂಕಿನ ಇಂಗಳಗಿಯಲ್ಲಿ ಅಭಿವೃದ್ಧಿಪಡಿಸಲಿರುವ ನಿವೇಶನಗಳು ಇನ್ನು ಆರು ತಿಂಗಳಲ್ಲಿ ಲಭಿಸುವುದು ನಿಚ್ಚಳವಾಗಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂಗಳಗಿಯ ವಿವಿಧ ಸರ್ವೆ ನಂಬರ್‌ಗಳಲ್ಲಿನ 24.24 ಎಕರೆ ಜಮೀನಿನಲ್ಲಿ 50:50 ಅನುಪಾತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಸತಿ ಯೋಜನೆಯ ₹11.76 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದರಿಂದ ಈ ಬೆಳವಣಿಗೆ ನಡೆದಿದೆ.
‘10 ವರ್ಷಗಳಿಂದ ಈ ಯೋಜನೆ ಬಾಕಿ ಉಳಿದಿತ್ತು. ನಾನು ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜಮೀರ್ ಅಹ್ಮದ್ ಖಾನ್ ಅವರನ್ನು ಕಂಡು ತ್ವರಿತವಾಗಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲು ವಿನಂತಿಸಿದೆ. ಅವರು ಸಹ ಅಷ್ಟೇ ಮುತುವರ್ಜಿ ವಹಿಸಿ ಬಹಳ ಬೇಗ ಕೆಲಸ ಆಗುವಂತೆ ನೋಡಿಕೊಂಡರು. ಈ ನಿವೇಶನಗಳಲ್ಲಿ 20x30 ಅಳತೆಯ 300ರಷ್ಟು ನಿವೇಶನಗಳು ಅಭಿವೃದ್ಧಿಗೊಳ್ಳಲಿದ್ದು, ಅರ್ಧದಷ್ಟು ನಿವೇಶನಗಳನ್ನು ಭೂಮಿ ನೀಡಿದ ರೈತರಿಗೆ ನೀಡಿ, ಉಳಿದ 150 ನಿವೇಶನಗಳನ್ನು ಮನೆಗಳಿಲ್ಲದ ಅರ್ಹ ಫಲಾನುಭವಿಗಳನ್ನು ಗುರುತಿಸಿ ರಿಯಾಯಿತಿ ದರದಲ್ಲಿ ನೀಡಲಾಗುವುದು’ ಎಂದು ‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.
ಲೇಔಟ್ ಅಭಿವೃದ್ಧಿಗೆ ಶೀಘ್ರದಲ್ಲೇ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು. ಉದ್ಯಾನ, ರಸ್ತೆ, ಅಗತ್ಯದ ಸೌಲಭ್ಯಗಳಿಗೆ ಸ್ಥಳ ಮೀಸಲಿಟ್ಟ ಬಳಿಕ 150ರಷ್ಟು ನಿವೇಶನಗಳು ಅರ್ಜಿ ಸಲ್ಲಿಸಿದ ಅರ್ಹರಿಗೆ ಲಭಿಸಲಿದೆ. ಆರು ತಿಂಗಳೊಳಗೆ ನಿವೇಶನ ಹಂಚಿಕೆ ಸಾಧ್ಯವಾಗಲಿದೆ. ಮರಿಯಮ್ಮನಹಳ್ಳಿ ಸಹಿತ ಕೆಲವೆಡೆ ರೈತರೇ ಮುಂದೆ ಬಂದು ನಿವೇಶನ ಅಭಿವೃದ್ಧಿಗೆ ಕೇಳಿಕೊಂಡಿದ್ದಾರೆ. ಶೀಘ್ರ ಈ ಬಗ್ಗೆ ಅಧಿಸೂಚನೆ ಹೊರಡಿಸಿ ಇನ್ನಷ್ಟು ಲೇಔಟ್ ಅಭಿವೃದ್ಧಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುತ್ತದೆ’ ಎಂದು ಅವರು ಹೇಳಿದರು.
ಸಾವಿರಾರು ಅರ್ಜಿಗಳಿವೆ ಒಂದೇ ಮನೆಯಿಂದ 3–4 ಮಂದಿ ಅರ್ಜಿ ಹಾಕಿದ್ದೂ ಇದೆ. ಯಾರಿಗೆ ಮನೆ ಇಲ್ಲ ಎಂಬುದನ್ನು ತಿಳಿದುಕೊಂಡು ಅಂತಹರಿಗೆ ಮಾತ್ರ ನಿವೇಶನ ಹಂಚಲಾಗುವುದುಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ ‘ಹುಡಾ’ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.