ADVERTISEMENT

ವಿಜಯನಗರ; ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 14:01 IST
Last Updated 15 ಆಗಸ್ಟ್ 2022, 14:01 IST
ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ
ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ   

ಹೊಸಪೇಟೆ (ವಿಜಯನಗರ): ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸೋಮವಾರ ನಗರದ ಮುನ್ಸಿಪಲ್‌ ಮೈದಾನದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಸುಕಿನ ಜಾವ ಐದು ಗಂಟೆಗೆ ದೇಶದಲ್ಲೇ ಅತಿ ಎತ್ತರದ (405 ಅಡಿ) ನೂತನ ಧ್ವಜಸ್ತಂಭದಲ್ಲಿ 120X80 ಅಡಿ ಅಳತೆಯ ತ್ರಿವರ್ಣ ಧ್ವಜಾರೋಹಣ ಮಾಡಲಾಯಿತು. ಪ್ರತಿ ವರ್ಷದಂತೆ ಬೆಳಿಗ್ಗೆ 9ಕ್ಕೆ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಧ್ವಜಾರೋಹಣ ಮಾಡಿದರು. ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ, ಪಥ ಸಂಚಲನ ವೀಕ್ಷಿಸಿದರು. ಅನಂತರ ವಿವಿಧ ಶಾಲಾ, ಕಾಲೇಜಿನ ಮಕ್ಕಳು ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ಸಚಿವ ಆನಂದ್‌ ಸಿಂಗ್‌, ‘ರೋಮ್‌ ನಂತರ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯ ಎಂಬ ಹೆಗ್ಗಳಿಕೆ ವಿಜಯನಗರ ಹೊಂದಿತ್ತು. ಆಡಳಿತ, ನೀರಾವರಿ ವ್ಯವಸ್ಥೆಗೆ ಹೆಸರಾಗಿತ್ತು. ಈಗಲೂ ಆ ನೀರಾವರಿ ವ್ಯವಸ್ಥೆ ಜೀವಂತವಾಗಿದ್ದು, ಆ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ ನೀರು ಹರಿಯುತ್ತಿದೆ. ವಿಜಯನಗರ ಇತಿಹಾಸ ನಿರ್ಮಿಸುವ ನೆಲ. ಈಗ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜ ಹಾರಿಸಿ ಹೊಸ ದಾಖಲೆ ನಿರ್ಮಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಈಗಾಗಲೇ ಹಂಪಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ನಡೆದಿದೆ. ಕಮಲಾಪುರದಲ್ಲಿ ತ್ರಿಸ್ಟಾರ್‌ ಹೋಟೆಲ್‌ ನಿರ್ಮಾಣಕ್ಕೆ ಚಾಲನೆ ಕೊಡಲಾಗಿದೆ. ಪ್ರಮುಖ ರಸ್ತೆಗಳ ವಿಸ್ತರಣೆ ನಡೆದಿದೆ. ₹10 ಕೋಟಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಮಲಾಪುರ–ಹಂಪಿ ನಡುವೆ ಹೆಲಿಪೋರ್ಟ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಕೃಷಿ ಪ್ರವಾಸೋದ್ಯಮ ಉತ್ತೇಜಿಸಲು ₹5 ಕೋಟಿಯಲ್ಲಿ ಕೃಷಿ ಪ್ರವಾಸಿ ಸೌಧ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಹೊಸಪೇಟೆ, ಕಮಲಾಪುರದಲ್ಲಿ ತಲಾ ಐದು ಧ್ಯಾನ ಕೇಂದ್ರಗಳನ್ನು ₹5 ಕೊಟಿಯಲ್ಲಿ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ನೂತನ ಕಟ್ಟಡವನ್ನು ಟಿ.ಎಸ್‌.ಪಿ. ಜಮೀನಿನಲ್ಲಿ ನಿರ್ಮಿಸಲು ₹4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಟೆಂಡರ್‌ ಪ್ರಕ್ರಿಯೆಯಲ್ಲಿದೆ. ನಗರ ಹೊರವಲಯದ ಜಂಬುನಾಥಹಳ್ಳಿಯಲ್ಲಿ ಡಿ.ಎ.ಆರ್‌ ಕೇಂದ್ರಸ್ಥಾನ, ಪೊಲೀಸ್‌ ವಸತಿ ಗೃಹಗಳು, ಉಪಾಹಾರ ಮಂಡಿ ಸೇರಿದಂತೆ ಇತರೆ ಮೌಲಸೌಕರ್ಯವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲು ₹4 ಕೋಟಿ ಬಿಡುಗಡೆಗೊಳಿಸಲಾಗಿದೆ. ನೂತನ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಒಂದೊಂದಾಗಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನ ಪ್ರಾಣ ಕೊಟ್ಟಿದ್ದಾರೆ. ನಾವು ಆ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ಅವರ ಹೋರಾಟದಿಂದ ಸಿಕ್ಕಿರುವ ಸ್ವಾತಂತ್ರ್ಯದ ಫಲಾನುಭವಿಗಳು ನಾವು. ಹುತಾತ್ಮರ ಸ್ಮರಣೆ, ನೆನಪು ಮಾಡಿಕೊಂಡು ಅವರಿಗೆ ಗೌರವ ಸಲ್ಲಿಸುವ ಕೆಲಸ ನಾವೆಲ್ಲ ಮಾಡಬೇಕು. ‘ಹರ್‌ ಘರ್ ತಿರಂಗಾ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಪ್ರತಿ ವರ್ಷ ಪ್ರತಿಯೊಬ್ಬರೂ ಅವರ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.

ಮಾಜಿ ಸೈನಿಕರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಸಂಸದ ವೈ.ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಪೌರಾಯುಕ್ತ ಮನೋಹರ್‌, ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ಜಿಲ್ಲಾ ಪಂಚಾಯಿತಿ ಸಿ.ಇ.ಒ. ಹರ್ಷಲ್‌ ಭೋಯರ್‌ ನಾರಾಯಣರಾವ್‌, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್‌ ಮೆಹ್ತಾ, ನಗರಸಭೆ ಸದಸ್ಯರು ಸೇರಿದಂತೆ ಇತರರಿದ್ದರು.

---

‘ಪ್ರತಿ ವರ್ಷ ಫೆಬ್ರುವರಿ 14ರಂದು ವಿದೇಶಿಗರ ಸಂಸ್ಕೃತಿಯ ವ್ಯಾಲೆಂಟೈನ್ಸ್‌ ಡೇ ಆಚರಿಸುತ್ತೇವೆ. ಅದರ ಬದಲು ಹುತಾತ್ಮರ ಸ್ಮರಿಸುವ ಕೆಲಸವಾಗಬೇಕು. ಆ ದಿನವೇ ಭಗತ್‌ಸಿಂಗ್‌, ರಾಜಗುರು ಹಾಗೂ ಸುಖ್‌ದೇವ್‌ ಅವರಿಗೆ ಗಲ್ಲಿಗೇರಿಸಲಾಗಿದೆ. ಯೌವನಾವಸ್ಥೆಯಲ್ಲೇ ಅವರು ದೇಶಕ್ಕಾಗಿ ಪ್ರಾಣ ಕೊಟ್ಟರು’ ಎಂದು ಆನಂದ್‌ ಸಿಂಗ್‌ ಹೇಳಿದರು.

‘1931ರ ಮಾರ್ಚ್‌ 23ರಂದು ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದೆ. ಫೆಬ್ರುವರಿ 14 ಹುತಾತ್ಮರ ದಿನ ಎಂಬ ಚರ್ಚೆಯೂ ಇದೆ’ ಎಂದರು.

ಆದರೆ, ದೇಶದಲ್ಲಿ ಪ್ರತಿ ವರ್ಷ ಮಾರ್ಚ್‌ 23ರಂದು ಹುತಾತ್ಮ ದಿನವಾಗಿ ಆಚರಿಸಲಾಗುತ್ತದೆ. 1931ರ ಮಾರ್ಚ್ 23ರಂದು ಲಾಹೋರ್‌ನಲ್ಲಿ ಭಗತ್‌ ಸಿಂಗ್‌, ರಾಜಗುರು ಹಾಗೂ ಸುಖ್‌ ದೇವ್‌ ಅವರಿಗೆ ಗಲ್ಲಿಗೇರಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೆ. 14 ಅವರನ್ನು ಗಲ್ಲಿಗೇರಿಸಲಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದೆ.

ಹರಿದು ಬಂದ ಜನಸಾಗರದೇಶದ ಅತಿ ಎತ್ತರದ ಧ್ವಜಸ್ತಂಭ ಕಣ್ತುಂಬಿಕೊಳ್ಳಲು ನಗರದ ಮುನ್ಸಿಪಲ್‌ ಮೈದಾನಕ್ಕೆ ಸೋಮವಾರ ಜನಸಾಗರವೇ ಹರಿದು ಬಂದಿತ್ತು.

ಬೆಳಿಗ್ಗೆ ನಗರದ ವಿವಿಧ ಕಚೇರಿ, ಕಟ್ಟಡಗಳು, ಶಾಲಾ, ಕಾಲೇಜುಗಳಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ ನಂತರ ಅಲ್ಲಿನ ಸಿಬ್ಬಂದಿ, ಮಕ್ಕಳು ಹಾಗೂ ಸಾರ್ವಜನಿಕರು ಮೈದಾನದತ್ತ ಮುಖ ಮಾಡಿದರು. ಕಾಲೇಜು ರಸ್ತೆಯಲ್ಲಿ ವಾಹನಗಳು, ಹೆಚ್ಚಿನ ಸಂಖ್ಯೆಯ ಜನರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನದ ವರೆಗೆ ಜನಜಾತ್ರೆ ಇತ್ತು. ಪ್ರತಿಯೊಬ್ಬರೂ ಧ್ವಜದಡಿ ನಿಂತುಕೊಂಡು ಸೆಲ್ಫಿ, ಛಾಯಾಚಿತ್ರ ತೆಗೆಸಿಕೊಂಡು ಸಂಭ್ರಮಿಸುತ್ತಿರುವ ದೃಶ್ಯ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.