ಹೊಸಪೇಟೆ (ವಿಜಯನಗರ): 'ಧಾರ್ಮಿಕ ಕೇಂದ್ರಗಳ ಮೇಲೆ ಧ್ವನಿವರ್ಧಕಗಳ ಶಬ್ದ ಎಷ್ಟು ಇರಬೇಕು ಎನ್ನುವುದಕ್ಕೆ ಸಂಬಂಧಿಸಿದ ನಿಯಮ ಮಸೀದಿಗಳಿಗೆ ಮಾತ್ರ ಮಾಡುತ್ತಿದ್ದೇವೆ ಎನ್ನುವುದು ಸುಳ್ಳು’ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದರು.
ಬುಧವಾರ ಇಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರಿಗೂ ಅನ್ವಯಿಸುವ ರೀತಿಯಲ್ಲಿ ನಿಯಮಗಳನ್ನು ಮಾಡಲಾಗುತ್ತದೆ. ಗಣೇಶ ಚತುರ್ಥಿ ವರ್ಷಕ್ಕೊಮ್ಮೆ ಬರುತ್ತದೆ. ಆದರೆ, ದಿನಕ್ಕೆ ಐದು ಸಲ ನಮಾಜ್ ಮಾಡಲಾಗುತ್ತದೆ. ಆದರೆ, ಎಲ್ಲರೂ ಅವರ ಇತಿಮಿತಿಯಲ್ಲಿ ಮಾಡಬೇಕು. ಮಸೀದಿ, ದೇವಸ್ಥಾನ, ಚರ್ಚ್‌ಗಳ ಮೇಲೆ ಧ್ವನಿವರ್ಧಕ ಅಳವಡಿಸಲು ಶಬ್ದಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧಾರ ಮಾಡುತ್ತದೆ’ ಎಂದರು.
‘ಧ್ವನಿವರ್ಧಕದಿಂದ ಹೊರಹೊಮ್ಮುವ ಶಬ್ದ ಎಷ್ಟಿರಬೇಕು ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಆದರೆ, ಕೆಲವು ನಿಯಮಗಳಿವೆ. ಅದಕ್ಕೆ ಸಂಬಂಧಿಸಿದ ಆದೇಶ ಹೊರಡಿಸಲಾಗುವುದು. ಅದರನ್ವಯ ಆಯಾ ಜಿಲ್ಲಾಡಳಿತಗಳು ಕೆಲಸ ನಿರ್ವಹಿಸಲಿವೆ. ಡಿವೈಸ್‌ಗಳ ಮೂಲಕ ಶಬ್ದ ನಿಯಂತ್ರಿಸಲು ಯೋಜಿಸಲಾಗಿದೆ. ಎಷ್ಟೇ ಸೌಂಡ್ ಇಟ್ಟರೂ ಡಿವೈಸ್ ನಿಯಂತ್ರಿಸುತ್ತದೆ. ಈ ಕುರಿತು ತರಬೇತಿ ನೀಡಲಾಗುತ್ತದೆ. ಬೆಂಗಳೂರು ನಗರವೊಂದರಲ್ಲೇ 120 ಡಿವೈಸ್ ನೀಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.