ADVERTISEMENT

ಅದ್ದೂರಿ ಜೈಪುರ ಅರಮನೆ‌ ಸೆಟ್‌ನಲ್ಲಿ ಸಚಿವ ಆನಂದ್ ಸಿಂಗ್ ಮಗಳ ಆರತಕ್ಷತೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 16:37 IST
Last Updated 9 ಡಿಸೆಂಬರ್ 2022, 16:37 IST
   

ಹೊಸಪೇಟೆ (ವಿಜಯನಗರ): ಅದ್ದೂರಿ ಜೈಪುರ ಅರಮನೆ ಮಾದರಿಯ ಸೆಟ್ ನಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಗಳ ಆರತಕ್ಷತೆ ಸಮಾರಂಭ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನ ಸಮೀಪ ಶುಕ್ರವಾರ ರಾತ್ರಿ ನಡೆಯಿತು.

ಮಧ್ಯಪ್ರದೇಶದ ಉದ್ಯಮಿ ವೀರೇಂದ್ರ ಸಿಂಗ್ ಜಾದೋನ್ ಅವರ ಮಗ ಯಶರಾಜ್ ಸಿಂಗ್ ಜಾದೋನ್ ಹಾಗೂ ಆನಂದ್ ಸಿಂಗ್ ಮಗಳಾದ ವೈಷ್ಣವಿ ಸಿಂಗ್ ಮದುವೆ ಡಿಸೆಂಬರ್ 6ರಂದು ರಾಜಸ್ತಾನದ ಜೈಪುರದಲ್ಲಿ ನಡೆದಿತ್ತು. ಶುಕ್ರವಾರ ಆರತಕ್ಷತೆ ಸಮಾರಂಭ ನಗರದಲ್ಲಿ ನಡೆಯಿತು.

ಇದಕ್ಕಾಗಿ ನಗರದ ಭಟ್ರಹಳ್ಳಿ ದೇವಸ್ಥಾನ ಸಮೀಪವಿರುವ ಆನಂದ್ ಸಿಂಗ್ ಅವರ ಬಂಗ್ಲೆ ಸಮೀಪದ ವಿಶಾಲ ಜಾಗದಲ್ಲಿ ಜೈಪುರ ಮಾದರಿಯಲ್ಲಿ ಅರಮನೆ ಪ್ರತಿಕೃತಿ ನಿರ್ಮಿಸಲಾಗಿದೆ. ಅದರೊಳಗೆ ಕಾರಂಜಿ, ಉದ್ಯಾನ ನಿರ್ಮಿಸಲಾಗಿದೆ. ಅಲಂಕಾರಿಕ ಗಿಡಗಳನ್ನು ಇಡಲಾಗಿದೆ. ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ.

ADVERTISEMENT

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಗಣಿ ಸಚಿವ ಹಾಲಪ್ಪ‌ಆಚಾರ, ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ,‌ ಉಜ್ಜಿಯಿನಿ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ನಂದಿಪುರದ‌ ಮಹೇಶ್ವರ ಸ್ವಾಮೀಜಿ, ಮಾತಂಗ ಭಾರತಿ ಸ್ವಾಮೀಜಿ ವಧು-ವರರಿಗೆ ಶುಭ ಕೋರಿದರು.

ಆನಂದ್ ಸಿಂಗ್ ಅವರ ಬೆಂಬಲಿಗರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕ್ಷೇತ್ರದ ಜನರು ಮದುವೆಗೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.