ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಒಬ್ಬ ವಿದ್ಯಾರ್ಥಿನಿ, ಇಬ್ಬರು ಶಿಕ್ಷಕಿಯರು, ಆರು ಕೊಠಡಿಗಳು– ಇದು ಪಟ್ಟಣದ ಅರಳಿಹಳ್ಳಿಯ 22ನೇ ವಾರ್ಡ್‍ನಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ.
1987ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳು ಓದಬಹುದು. ಆರಂಭದಲ್ಲಿ 150 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿತ್ತು. ಈಗ 5ನೇ ತರಗತಿ ಓದುತ್ತಿರುವ ಗುಲ್ಜಾರ್ ಬಾನು ಮಾತ್ರ ಇದ್ದಾಳೆ.
ಕಳೆದ ವರ್ಷ 7 ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕಿಯರಿದ್ದರು. ಜನವರಿ ತಿಂಗಳಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದು, ಈಗ ಇಬ್ಬರು ಶಿಕ್ಷಕಿಯರು ಇದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಣದ ಬಳಿಕ ಉರ್ದು ಪ್ರೌಢಶಾಲೆ ಇಲ್ಲದಿರುವುದು ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಗೆ ಮುಖ್ಯ ಕಾರಣ. ಎಲ್ಲರೂ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳಿಗೆ ತೆರಳುತ್ತಿದ್ದಾರೆ. ವಿಶೇಷವೆಂದರೆ ಈ ಅರಳಿಹಳ್ಳಿಯು ತುಂಗಭದ್ರಾ ಜಲಾಶಯ ನಿರ್ಮಾಣದಿಂದ ಸ್ಥಳಾಂತರಗೊಂಡವರ ಪುನರ್ವಸತಿ ಪ್ರದೇಶ.
‘ಒಬ್ಬಳೇ ವಿದ್ಯಾರ್ಥಿನಿ ಇರುವ ಕಾರಣ ಆಕೆಯ ಕಲಿಕೆಗೆ ತೊಂದರೆಯಾಗಿದೆ. ಮುಖ್ಯ ಶಿಕ್ಷಕಿಯ ಕಚೇರಿಯಲ್ಲೇ ವಿದ್ಯಾರ್ಥಿನಿ ಶಿಕ್ಷಣ ಪಡೆಯುತ್ತಾಳೆ. ಪಠ್ಯೇತರ ಚಟುವಟಿಕೆಗಳಿಂದ ಆಕೆ ವಂಚಿತಳಾಗಿದ್ದಾಳೆ. ಶಾಲೆಯ ಎಲ್ಲ ಆರು ಕೊಠಡಿಗಳನ್ನು ಚುನಾವಣೆ ವೇಳೆ ಮತಗಟ್ಟೆಗಳನ್ನಾಗಿ ಬಳಸಲಾಗುತ್ತದೆ’ ಎಂದು ಸ್ಥಳೀಯರು ತಿಳಿಸಿದರು.
ಇದನ್ನು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಹೆಚ್ಚುವರಿ ಇರುವ ಒಬ್ಬ ಶಿಕ್ಷಕಿಯನ್ನು ಅನ್ಯ ಶಾಲೆಗೆ ನಿಯೋಜಿಸಲಾಗುವುದು.-ಮೈಲೇಶ್ ಬೇವೂರ್ ಕ್ಷೇತ್ರ ಶಿಕ್ಷಣಾಧಿಕಾರಿ
ಈಗಿರುವ ಉರ್ದು ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಬೇಕು. ಇದರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.–ಪವಾಡಿ ಹನುಮಂತಪ್ಪ ಪುರಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.