ಹಂಪಿ (ಹೊಸಪೇಟೆ): ‘ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ...’ ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರು ಶನಿವಾರ ಮಧ್ಯರಾತ್ರಿ ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ನಟ ದರ್ಶನ್ ನಟನೆಯ ಚಕ್ರವರ್ತಿ ಕನ್ನಡ ಚಿತ್ರಗೀತೆ ಹಾಡುತ್ತಿದ್ದಂತೆ ಅಲ್ಲಿದ್ದವರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಕಪ್ಪು ಬಣ್ಣದ ಪ್ಯಾಂಟ್, ತಿಳಿ ಹಸಿರು ಬಣ್ಣದ ಟೀ ಶರ್ಟ್ ಜರ್ಕಿನ್ ಧರಿಸಿದ್ದ ಅರ್ಮಾನ್ ಮಲಿಕ್ ತಮ್ಮ ಸುಮಧುರ ಕಂಠದಿಂದ ಒಂದೊಂದೆ ಹಾಡುಗಳನ್ನು ಹಾಡುತ್ತ ಅಲ್ಲಿದ್ದವರಲ್ಲಿ ಕಿಚ್ಚು ಹಚ್ಚಿದರು. ಜನ ಮೈಮರೆತು ಅವರಿದ್ದ ಸ್ಥಳದಲ್ಲಿಯೇ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದರು.
ಕನ್ನಡ, ಹಿಂದಿ, ತೆಲುಗು ಚಿತ್ರಗೀತೆಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ಹಾಡಿ ಜನರನ್ನು ರಂಜಿಸಿದರು. ಸ್ವತಃ ಅವರು ಕೂಡ ಕೆಲವು ಗೀತೆಗಳನ್ನು ಹಾಡುತ್ತಲೇ ಹೆಜ್ಜೆ ಹಾಕಿದರು.
'ಮೈ ಹೂ ಹಿರೋ ತೇರಾ' ಸನಮ್ ರೇ ಚಿತ್ರ, 'ಹುವಾ ಹೇ ಪೆಹಲಿ ಬಾರ್', ಇಮ್ರಾನ್ ಹಶ್ಮಿ ನಟನೆಯ ಜನ್ನತ್ -2 ಚಿತ್ರ, 'ಮೈ ರಹೂ ಯಾ ನಾ ರಹ್ಞೂ' ಅಜರ್ ಚಿತ್ರ, 'ಬೋಲ್ ದೋ ನಾ ಜರಾ' ಎಂ.ಎಸ್.ದೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರ ಸೇರಿದಂತೆ ಇತರೆ ಗೀತೆಗಳನ್ನು ಹಾಡಿದರು.
ಮುಂಗಾರು ಮಳೆ-2 ಚಿತ್ರದ 'ಸರಿಯಾಗಿ ನೆನಪಿದೆ ನನಗೆ ಇದಕ್ಕೆಲ್ಲಾ ಕಾರಣ ನಿನ್ನ ಕಿರುನಗೆ', ಡಾ. ಪುನೀತ್ ರಾಜಕುಮಾರ್ ಸರ್ ಅವರು ಸದಾ ನನ್ನ ಹೃದಯದಲ್ಲಿದ್ದಾರೆ. ಅವರಿಗಾಗಿ ಅವರ ನಟನೆಯ ‘ಯುವರತ್ನ’ ಚಿತ್ರದ 'ನಿನ್ನ ಜೊತೆ ನನ್ನ ಕಥೆ ಜೀವಿಸಿದೆ' ಹಾಡು ಹಾಡುತ್ತೇನೆ ಎಂದು ಹೇಳಿ ಮುಂದುವರೆಯುತ್ತಿದ್ದಂತೆ ಜನ ಶಿಳ್ಳೆ ಹೊಡೆದು ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.