ADVERTISEMENT

ಎಲ್ಲ ಮೃಗಾಲಯಕ್ಕೆ ಸಮಾನ ಆದ್ಯತೆ: ಎಲ್‌.ಆರ್‌. ಮಹದೇವಸ್ವಾಮಿ

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 8:13 IST
Last Updated 17 ಏಪ್ರಿಲ್ 2021, 8:13 IST
 ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ   

ಹೊಸಪೇಟೆ (ವಿಜಯನಗರ): ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ ಶನಿವಾರ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿ ವರ್ಗದೊಂದಿಗೆ ನೂತನ ಹವಾನಿಯಂತ್ರಿತ ಬಸ್ಸಿನಲ್ಲಿ ಹುಲಿ, ಸಿಂಹ ಸಫಾರಿ ಮಾಡಿದರು. ಬೇಸಿಗೆಯಲ್ಲಿ ಪ್ರಾಣಿಗಳಿಗೆ ಮಾಡುತ್ತಿರುವ ವಿಶೇಷ ಆರೈಕೆ, ಫಾಗರ್‌ ಅಳವಡಿಕೆ ಕುರಿತು ಮೃಗಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಕಿರಣ್‌ ಕುಮಾರ್‌ ಅವರು ಮಾಹಿತಿ ನೀಡಿದರು.

ಬಳಿಕ ಮಹದೇವಸ್ವಾಮಿ ಅವರು ಚಿರತೆ, ಕರಡಿ, ಕತ್ತೆ ಕಿರುಬ ಸೇರಿದಂತೆ ಇತರೆ ಪ್ರಾಣಿಗಳನ್ನು ವೀಕ್ಷಿಸಿದರು. ಮೃಗಾಲಯದ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ‘ನವೆಂಬರ್‌ನಲ್ಲಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ಅಂದಿನಿಂದ ಇದುವರೆಗೆ ಮೈಸೂರು, ಬೆಳಗಾವಿ, ಬನ್ನೇರುಘಟ್ಟ, ಶಿವಮೊಗ್ಗ ಹಾಗೂ ಹಂಪಿ ಮೃಗಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಮೈಸೂರು ಮೃಗಾಲಯದೊಂದಿಗೆ ಎಲ್ಲ ರೀತಿಯಲ್ಲೂ ಸ್ಪರ್ಧೆ ಒಡ್ಡುವಂತೆ ಹಂಪಿ ಮೃಗಾಲಯ ಬೆಳೆಯುತ್ತಿರುವುದು ಸಂತಸದ ಸಂಗತಿ. ರಾಜ್ಯದ ಒಂಬತ್ತೂ ಮೃಗಾಲಯಗಳಿಗೆ ಸಮಾನ ಆದ್ಯತೆ ನೀಡಿ ಬೆಳೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಸಾಕಷ್ಟು ಬಿಸಿಲು ಇರುತ್ತದೆ. ಇಂತಹ ಪ್ರತಿಕೂಲ ಹವಾಮಾನದಲ್ಲೂ ಮೃಗಾಲಯದಲ್ಲಿ 9,000 ಗಿಡಗಳನ್ನು ಬೆಳೆಸಿದ್ದಾರೆ. ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಯಿಂದ ನೀರು ಪಡೆಯಲು ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡರೆ ಇಡೀ ಉದ್ಯಾನ ಹಸಿರಿನಿಂದ ಕಂಗೊಳಿಸಲಿದೆ. ಆ ನೀರಿನಿಂದ ಕೆರೆ, ಕಟ್ಟೆ ತುಂಬಿಸಿ, ಅಂತರ್ಜಲ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯದ ಎಲ್ಲ ಮೃಗಾಲಯಗಳಿಗೆ ರಾಜ್ಯ ಸರ್ಕಾರ ಒಟ್ಟು ₹100 ಕೋಟಿ ಅನುದಾನ ಘೋಷಿಸಿತ್ತು. ಈ ಪೈಕಿ ₹38 ಕೋಟಿ ಬಿಡುಗಡೆಯಾಗಿದೆ. ಕೋವಿಡ್‌ ಇರುವುದರಿಂದ ಮೃಗಾಲಯಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಬಿಡುಗಡೆಯಾದ ಅನುದಾನವನ್ನು ಮೃಗಾಲಯದ ಸಿಬ್ಬಂದಿಯ ವೇತನ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದರು.

ಎಸಿಎಫ್‌ ಮಂಜುನಾಥ, ಆರ್‌ಎಫ್‌ಒ ರಮೇಶ, ಡಿಆರ್‌ಎಫ್‌ಒ ಪರಮೇಶ್ವರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.