ಹೊಸಪೇಟೆ (ವಿಜಯನಗರ): ಆಯುಧ ಪೂಜೆ ಹಾಗೂ ವಿಜಯ ದಶಮಿ ಆಚರಣೆಗೆ ಹೊಸಪೇಟೆ ನಗರ ಸಹಿತ ವಿಜಯನಗರ ಜಿಲ್ಲೆ ಸಂಪೂರ್ಣ ಸಜ್ಜಾಗಿದ್ದು, ಬೆಲೆ ಏರಿಕೆಯ ನಡುವೆಯೂ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿದೆ.
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಗುರುವಾರ ದಿನವಿಡೀ ದಟ್ಟಣೆ ಕಾಣಿಸಿತು. ಕುಂಬಳಕಾಯಿ, ಲಿಂಬೆಹಣ್ಣು, ತೆಂಗಿನಕಾಯಿ, ಹೂ, ಹಣ್ಣು ಖರೀದಿಯ ಭರಾಟೆ ಜೋರಾಗಿತ್ತು.
ಆಯುಧ ಪೂಜೆ, ಯಂತ್ರ ಪೂಜೆಗಳು ನವರಾತ್ರಿಯ ದಿನಗಳಲ್ಲಿ ನಡೆಯುತ್ತ ಬಂದಿದ್ದು, ಮಹಾನವಮಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಆಯುಧ ಪೂಜೆಯನ್ನು ನಡೆಸಲಾಗುತ್ತದೆ. ಬದನೆಕಾಯಿ ಪಲ್ಯ ಮಾಡಿ ದೇವರಿಗೆ ನೈವೇದ್ಯ ಮಾಡುವ ಪದ್ಧತಿ ಈ ಭಾಗದಲ್ಲಿ ಇದ್ದು, ಅದಕ್ಕೂ ಸಕಲ ವ್ಯವಸ್ಥೆ ಮಾಡಲಾಗಿದೆ.
ದರ ದುಬಾರಿ: ಮಧ್ಯಮ ಗಾತ್ರದ ಕುಂಬಳಕಾಯಿ ಬೆಲೆ ₹100 ಇದ್ದು, ಸಾಧಾರಣ ಬಾಳೆಕಂಬ ಜೋಡಿಗೆ ₹50 ದರ ಇತ್ತು. ಮಾರು ಮಲ್ಲಿಗೆಗೆ ₹200, ಸೇವಂತಿಗೆ ₹200, ಚೆಂಡುಹೂ ₹80 ದರ ಇತ್ತು.
ಹಣ್ಣುಗಳ ಪೈಕಿ ಸೇಬು ಕಿಲೋಗೆ ₹150, ದಾಳಿಂಬೆ ₹200, ದ್ರಾಕ್ಷಿ ₹200, ಕಿತ್ತಳೆ ₹100, ಮೂಸಂಬಿ ₹100, ಏಲಕ್ಕಿ ಬಾಳೆಹಣ್ಣು ₹100, ಹಸಿರು ಬಾಳೆಹಣ್ಣಿಗೆ ಡಜನ್‌ಗೆ ₹60, ಸುಗಂಧಿ ಡಜನ್‌ಗೆ ₹30 ಧಾರಣೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.