ADVERTISEMENT

ನ್ಯಾ. ರೋಹಿಣಿ ಆಯೋಗದ ಶಿಫಾರಸು ಜಾರಿಗೆ ತರಲು ಹಿಂದುಳಿದ ವರ್ಗಗಳ ಒಕ್ಕೂಟದ ಮನವಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 13:03 IST
Last Updated 12 ನವೆಂಬರ್ 2024, 13:03 IST
<div class="paragraphs"><p>ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು</p></div>

ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು

   

ಹೊಸಪೇಟೆ (ವಿಜಯನಗರ): ‘ಹಿಂದುಳಿದ ವರ್ಗಗಳ ಮೀಸಲಾತಿ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ನ್ಯಾ.ರೋಹಿಣಿ ಆಯೋಗದ ವರದಿ ಪರಿಣಾಮಕಾರಿಯಾಗಿದ್ದು, ಆಯೋಗದ ಶಿಫಾರಸನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮತ್ತು ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮಂಗಳವಾರ ಇಲ್ಲಿ ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಿಯೋಗ, ಈ ಆಯೋಗವು 2023ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆಯೋಗವು ವೈಜ್ಞಾನಿಕವಾಗಿ ಜಾತಿಗಳ ವರ್ಗೀಕರಣ ಮಾಡಿದ್ದು, ಈ ಶಿಫಾರಸನ್ನು ಜಾರಿಗೊಳಿಸಿದರೆ ನೈಜ ಹಾಗೂ ಸಾಮಾಜಿಕ ಶೈಕ್ಷಣಿಕವಾಗಿ ಅತಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ದೊರೆತು ಸಂವಿಧಾನದ ಮೂಲ ಉದ್ದೇಶ ಈಡೇರಿದಂತಾಗುತ್ತದೆ ಎಂದು ಪ್ರತಿಪಾದಿಸಿತು.

ADVERTISEMENT

ಯಮುನೇಶ್ ಮಾತನಾಡಿ, ‘ಬಿ.ಪಿ. ಮಂಡಲ ಅಧ್ಯಕ್ಷತೆಯ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸು ಹಾಗೂ ಸುಪ್ರೀಂ ಕೋರ್ಟ್‍ನ ತೀರ್ಪಿನಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ 27 ಉದ್ಯೋಗ ಮೀಸಲಾತಿ ಕಾಯ್ದೆ 1992ರಿಂದ ಜಾರಿಗೆ ಬಂದಿದೆ. ಆದರೆ ದೇಶಾದ್ಯಂತ ಎಲ್ಲಾ ಹಿಂದುಳಿದ ಜಾತಿಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿರುವುದರಿಂದ ಕೆಲವು ಬಲಿಷ್ಠ ಜಾತಿಗಳಿಗೆ ಮಾತ್ರ ಸಿಂಹಪಾಲು ದೊರಕಿದ್ದು, ಅತೀ ಹಿಂದುಳಿದ, ಸಣ್ಣಪುಟ್ಟ ಜಾತಿಗಳಿಗೆ ಉದ್ಯೋಗ ಮೀಸಲಾತಿ ಮರಿಚಿಕೆಯಾಗಿಯೇ ಉಳಿದಿದೆ’ ಎಂದರು.

ಈ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ 2017ರಲ್ಲಿ ಕೇಂದ್ರ ಸರ್ಕಾರ ನ್ಯಾಯಮೂರ್ತಿ ರೋಹಿಣಿ ಆಯೋಗವನ್ನು ರಚಿಸಿತ್ತು. ಕೇಂದ್ರ ಸರ್ಕಾರವು ವಿಳಂಬ ಮಾಡದೆ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಯು.ಆಂಜನೇಯಲು ಮಾತನಾಡಿ, ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಶೇ 27ರಷ್ಟು ಮೀಸಲಾತಿ ಕಾನೂನು ಜಾರಿಗೊಳಿಸಿ 3 ದಶಕಗಳಾದರೂ ಈ ವರ್ಗಗಳಿಗೆ ದೊರೆತಿರುವ ಮೀಸಲಾತಿ ಪ್ರಮಾಣ ಶೇ 15ರಷ್ಟು ಮಾತ್ರ ಎಂದರು.

ಒಕ್ಕೂಟದ ಪದಾಧಿಕಾರಿಗಳಾದ ರವಿಕುಮಾರ್, ಈ.ಕುಮಾರಸ್ವಾಮಿ, ಎರ್ರಿಸ್ವಾಮಿ, ಕೆ.ರಾಘವೇಂದ್ರ, ಎಂ.ಶಂಕ್ರಪ್ಪ, ಎ.ಪಂಪಣ್ಣ, ಪ್ರೊ.ಉಮಾಮಹೇಶ್ವರ್. ಪ್ರೊ.ಎಂ.ಕೆ.ಲಕ್ಷ್ಮಣ, ರಾಮಕೃಷ್ಣ, ಗೋಪಿನಾಥ, ಈ.ರಾಘವೇಂದ್ರ, ಎಚ್.ತಿಪ್ಪೇಸ್ವಾಮಿ, ಮೊಹಮ್ಮದ್ ಬಾಷ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.