ADVERTISEMENT

ಹರಪನಹಳ್ಳಿ | ಬಗರ್ ಹುಕುಂ: ಹಕ್ಕುಪತ್ರ ವಿತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 14:07 IST
Last Updated 25 ಅಕ್ಟೋಬರ್ 2024, 14:07 IST
ಹರಪನಹಳ್ಳಿಯಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಹರಪನಹಳ್ಳಿಯಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.   

ಹರಪನಹಳ್ಳಿ: ಬಗರ್ ಹುಕುಂ ಸಾಗುವಳಿ ಮಾಡಿರುವ ರೈತರ ಭೂಮಿಗಳಿಗೆ ಪಟ್ಟಾ ಕೊಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್ ವಾದಿ) ಲಿಬರೇಷನ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹಿರೇಕೆರೆ ವೃತ್ತದಿಂದ ತಾಲ್ಲೂಕು ಆಡಳಿತ ಸೌಧದವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿ, ಬಳಿಕ ಬಹಿರಂಗ ಸಭೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

‘ಹೂವಿನಹಡಗಲಿ ತಾಲ್ಲೂಕು ಹ್ಯಾರಡ ಗ್ರಾಮದಲ್ಲಿ ಅಂದಾಜು 900 ಎಕರೆ, ಹರಪನಹಳ್ಳಿ ತಾಲ್ಲೂಕಿನ ಕಂಚಿಕೇರಿ ಸೇರಿ ವಿವಿಧ ಗ್ರಾಮಗಳಲ್ಲಿ ನೂರಾರು ರೈತರು ಸಾವಿರಾರು ಎಕರೆ ಭೂಮಿ ಪಹಣಿಯನ್ನು ಬ್ಲಾಕ್ ಮಾಡಲಾಗಿದೆ. ಇದರಿಂದ ಜೀವನಾಂಶಕ್ಕಾಗಿ ಉಳುಮೆ ಮಾಡಿಕೊಂಡಿರುವ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ADVERTISEMENT

‘ಹುಲಿಕಟ್ಟೆ, ಹ್ಯಾರಡ, ಬಳಿಗನೂರು ಗ್ರಾಮದಲ್ಲಿ 10 ಬೆಡ್‍ ನ ಆಸ್ಪತ್ರೆ ತೆರೆಯಬೇಕು. ಎನ್‍ಆರ್‌ಎಂಎಲ್‍ ಯೋಜನೆಯ ದುರುಪಯೋಗ ತಡೆಗಟ್ಟಬೇಕು. ಕೊಟ್ಟೂರು, ಹರಪನಹಳ್ಳಿ, ಹೂವಿನ ಹಡಗಲಿ ತಾಲ್ಲೂಕಿನ ಎಪಿಎಂಸಿಗಳಲ್ಲಿ ರೈತರಿಗೆ ದಲ್ಲಾಳಿಗಳಿಂದ ಆಗುತ್ತಿರುವ ವಂಚನೆ ತಪ್ಪಿಸಬೇಕು. ರೈತರ ಜಮೀನುಗಳಿಗೆ 12 ತಾಸು ಹಗಲು ವಿದ್ಯುತ್ ಪೂರೈಸಬೇಕು. ಹಡಗಲಿ ತಾಲ್ಲೂಕು ಇಟ್ಟಿಗಿ ಗ್ರಾಮದ ಪೋಲಿಸ್ ಠಾಣೆ ಹತ್ತಿರ ಮಹಿಳಾ ಶೌಚಾಲಯ ನಿರ್ಮಿಸಬೇಕು. ಹ್ಯಾರಡ ಗ್ರಾಮದ ಮಲಿಯಮ್ಮನ ಕೆರೆ, ಸಂಗಪ್ಪನಕೆರೆ, ಕಲ್ಲಪ್ಪನಕೆರೆ ಒತ್ತುವರಿ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಸಂದೇಶ ಪರಶುರಾಮ್, ಮುಖಂಡರಾದ ಸಂತೋಷ ಗುಳೇದಹಟ್ಟಿ, ಹುಲಿಕಟ್ಟೆ ಮೈಲಪ್ಪ, ನಾಗರಾಜ ಪೂಜಾರ, ವಿಜಯ ದೊರೆರಾಜ್, ಬಿ.ಬಾಲಗಂಗಾಧರ್, ಗುಳೇದಹಟ್ಟಿ ಹುಲಿಕಟ್ಟಿ ಮೈಲಪ್ಪ, ಇಬ್ರಾಹಿಂ ಸಾಬ್, ಸರಸ್ವತಿ, ಭಾರತಿ, ಕೊಟ್ರಮ್ಮ, ಟೀ ಅಜ್ಜಪ್ಪ, ಬೂದಿಹಾಳ ರಾಮಚಂದ್ರಪ್ಪ, ಕಾಳಪ್ಪ, ಹ್ಯಾರಡಾ ಫಕೀರಪ್ಪ, ಜೋಗಿ ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.