ADVERTISEMENT

ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 12:42 IST
Last Updated 2 ಜೂನ್ 2023, 12:42 IST

ಹೊಸಪೇಟೆ (ವಿಜಯನಗರ): ‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿನಲ್ಲಿ ಬಂಜಾರ ಸಮುದಾಯದ ಪಾತ್ರ ದೊಡ್ಡದಿದೆ. ಆದರೆ ಸಂಪುಟದಲ್ಲಿ ಮಾತ್ರ ಸಮುದಾಯದ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದು ಆಲ್‌ ಇಂಡಿಯಾ ಬಂಜಾರ ಸೇವಾ ಸಂಘದ (ಎಐಬಿಎಸ್‌ಎಸ್) ರಾಜ್ಯ ಉಪಾಧ್ಯಕ್ಷ ತೇಜಸ್ವಿ ನಾಯ್ಕ್‌ ಆರೋಪಿಸಿದರು.

‘ಹಾವೇರಿಯ ಶಾಸಕ ರುದ್ರಪ್ಪ ಲಮಾಣಿ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಠೋಡ್‌ ಇವರಲ್ಲಿ ಒಬ್ಬರಿಗಾದರೂ ಸಂಪುಟದಲ್ಲಿ ಸ್ಥಾನ ನೀಡಬೇಕಿತ್ತು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಪುಟದಲ್ಲಿ ಸ್ಥಾನ ಸಿಗುವುದರ ಜತೆಗೆ ನಿಗಮ, ಮಂಡಳಿಗಳಲ್ಲಿ ಬಂಜಾರ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು. ಚುನಾವಣೆಯಲ್ಲಿ ಸೋತಿರುವ ಭೀಮನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನೂ ಪರಿಗಣಿಸಬೇಕು. ಬಂಜಾರ ಸಮುದಾಯದ ಮನವಿ ತಿರಸ್ಕರಿಸಿದರೆ ಮುಂದಿನ ದಿನಗಳಲ್ಲಿ ತಾಂಡಾಗಳಿಗೆ ಸಂಚರಿಸಿ, ಜನರಿಗೆ ಮನವರಿಕೆ ಮಾಡಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಕುಮಾರ್‌ ಎಚ್ಚರಿಸಿದರು.

ADVERTISEMENT

‘ಬಂಜಾರ ಸಮುದಾಯದವರು ಈಗ ಜಾಗೃತರಾಗಿದ್ದಾರೆ. ಸದಾಶಿವ ಆಯೋಗದ ವರದಿ ಕುರಿತು ದ್ವಂದ್ವ ನಿಲುವು ತಳೆದ ನಾಯಕರನ್ನು ಸೋಲಿಸುವ ಮೂಲಕ ಸಮುದಾಯದವರು ತಮ್ಮ ಶಕ್ತಿ ತೋರಿಸಿದ್ದಾರೆ’ ಎಂದು ಮುಖಂಡರಾದ ಅಲೋಕ್‌ ನಾಯ್ಕ್, ಕುಮಾರ್‌ ನಾಯ್ಕ್‌, ರಾಮಾ ನಾಯ್ಕ್‌ ಹೇಳಿದರು. 

ಯುವ ಮುಖಂಡರಾದ ಮಂಜೂ ನಾಯ್ಕ, ಹನುಮ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.