ADVERTISEMENT

ಪೈಪ್ ಮೂಲಕ ನೀರು ಹರಿಸಲು ಯತ್ನ

ಬಸವ ಕಾಲುವೆಯಲ್ಲಿ ನಾಳೆಯಿಂದ ನೀರು ಬಿಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:15 IST
Last Updated 10 ನವೆಂಬರ್ 2024, 16:15 IST
ಹೊಸಪೇಟೆಯ ಬಸವ ಕಾಲುವೆಯ ಒಂದು ಬದಿಯಲ್ಲಿ ನೀರು ಹರಿಸಲು ಪೈಪ್ ಅಳವಡಿಸಿರುವುದು
ಹೊಸಪೇಟೆಯ ಬಸವ ಕಾಲುವೆಯ ಒಂದು ಬದಿಯಲ್ಲಿ ನೀರು ಹರಿಸಲು ಪೈಪ್ ಅಳವಡಿಸಿರುವುದು   

ಹೊಸಪೇಟೆ (ವಿಜಯನಗರ): ನಗರದ ಮೂರಂಗಡಿ ವೃತ್ತದ ತಳಭಾಗದಲ್ಲಿ ಕಸ ಕಟ್ಟಿಕೊಂಡು ನೀರು ಹರಿಯುವಿಕೆ ಸಂಪೂರ್ಣ ಬಂದ್ ಆಗಿರುವ ಬಸವ ಕಾಲುವೆಯಲ್ಲಿ ಒಂದೂವರೆ ಡಯಾ ಗಾತ್ರದ ಪೈಪ್‌ ಅಳವಡಿಸಲಾಗಿದ್ದು, ಮಂಗಳವಾರದಿಂದಲೇ ಇದರ ಮೂಲಕ ನೀರು ಹರಿಸುವ ಕಾರ್ಯ ಆರಂಭವಾಗಲಿದೆ.

ಭಾನುವಾರ ಮತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ನೀರಾವರಿ, ಅಗ್ನಿಶಾಮಕ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ತೂಬಿನ ಎರಡೂ ಬದಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ಹೂಳು ತೆಗೆಯುವ ಪ್ರಯತ್ನ ಮಾಡಿದರು. ಆದರೆ ಸಿಬ್ಬಂದಿಯ ಜೀವಕ್ಕೆ ಅಪಾಯ ಇರುವ ಕಾರಣ ಒಂದು ಬದಿಯಿಂದ ಇನ್ನೊಂದು ಬದಿಗೆ ಪೂರ್ಣ ಪ್ರಮಾಣದಲ್ಲಿ ಹೂಳು ತೆಗೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿಲ್ಲ. ಸಿಬ್ಬಂದಿ ತೆವಳಿಕೊಂಡೇ ಹೋಗಬೇಕಿದ್ದು, ಜೀವಕ್ಕೆ ಅಪಾಯಕಾರಿ ಎಂಬಂತಹ ಸ್ಥಿತಿ ಇಲ್ಲಿದೆ.

‘ಪೈಪ್ ಮೂಲಕ ನೀರನ್ನು ಬಲವಾಗಿ ಹಾಯಿಸಿ ಕಸ, ಕೊಳೆ, ಹೂಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡುವುದು ಹಾಗೂ ಇದರ ಜತೆಯಲ್ಲೇ ರೈತರಿಗೆ ನೀರು ಪೂರೈಸುವ ಉದ್ದೇಶ ಈ ಯೋಜನೆಯ ಹಿಂದೆ ಇದೆ. ಇದು ಸಫಲವಾದರೆ ಡಿ.10ರ ವರೆಗೆ ಈ ವ್ಯವಸ್ಥೆಯೇ ಮುಂದುವರಿಯಲಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಬಹುತೇಕ ಹೂಳು ತೆಗೆಯುವ ಕೆಲಸ ಕೊನೆಗೊಂಡಿದೆ. ಆದರೆ 300 ವರ್ಷಗಳ ಹಿಂದೆ ಇಟ್ಟಿಗೆಯಿಂದ ನಿರ್ಮಾಣವಾದ ಕಾಲುವೆಯ ತೂಬು ಶಿಥಿಲವಾಗಿದೆ. ಸದ್ಯ ತಾತ್ಕಾಲಿಕ ಪರಿಹಾರವನ್ನಷ್ಟೇ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ತಕ್ಷಣ ಅನುದಾನ ನೀಡುವ ಅಗತ್ಯ ಇದೆ. ಸ್ಥಳೀಯ ಶಾಸಕರು ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕಾಗಿದೆ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್‌ ಬಸಪ್ಪ ಜಾನ್ಕರ್‌ ತಿಳಿಸಿದರು.

ಸಂಕಷ್ಟದಲ್ಲೂ ಸಂತೋಷ: ಬಸವ ಕಾಲುವೆಯಲ್ಲಿ ಈ ಹಂತದಲ್ಲಿ ಭರ್ಜರಿಯಾಗಿ ನೀರು ಹರಿಯುತ್ತ ಮೂರು ಸಾವಿರಕ್ಕೂ ಅಧಿಕ ಎಕರೆ ಜಮೀನಿಗೆ ನೀರು ಹರಿಯಬೇಕಿತ್ತು. ಏಕೆಂದರೆ ಬೆಳೆದ ಬೆಳೆಗಳು ಈಗ ಕಟಾವಿನ ಹಂತಕ್ಕೆ ಬಂದಿವೆ. ಆದರೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಂಕಷ್ಟದಲ್ಲೂ ಮಾಡಿದಂತಹ ಕೆಲಸ ಎಲ್ಲರಿಗೂ ಸಂತೋಷ ಉಂಟುಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.