ADVERTISEMENT

ಉಸ್ತುವಾರಿ ಸಚಿವ ಖಂಡ್ರೆ ಯೋಗ್ಯತೆ ಪ್ರಶ್ನಿಸಿದ ಕೇಂದ್ರ ಸಚಿವ ಖೂಬಾ

ಸುಳ್ಳಿನ ಬಜಾರಿನಲ್ಲಿ ದೋಖಾ ದುಕಾನ್‌ 

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 10:12 IST
Last Updated 10 ಜುಲೈ 2023, 10:12 IST
   

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಸುಳ್ಳಿನ ಬಜಾರಿನಲ್ಲಿ ದೋಖಾ ದುಕಾನ್‌ ತೆರೆದು ಕೂತಿದ್ದಾರೆ. ನೂರು ಬಾರಿ ನನ್ನ ವಿರುದ್ಧ ಸುಳ್ಳು ಹೇಳಿ ಸತ್ಯ ಎಂದು ಬಿಂಬಿಸುತ್ತಿದ್ದಾರೆ. ಅವರಿಗೆ ನೈತಿಕತೆ ಇದೆಯಾ?’ ಹೀಗೆಂದು ಕೇಂದ್ರ ನವಿಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯುದ್ದಕ್ಕೂ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದರು. ಖಂಡ್ರೆ ಮಾತಿಗೆ ಸಿ.ಎಂ. ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಅದರಿಂದ ಬಜೆಟ್‌ನಲ್ಲಿ ಜಿಲ್ಲೆಗೆ ಏನೂ ಸಿಕ್ಕಿಲ್ಲ ಎಂದು ನಾನು ಹೇಳಿದ್ದೆ. ಹೀಗೆ ಹೇಳಿದ್ದಕ್ಕೆ ಕೇಂದ್ರ ಸರ್ಕಾರ ಹಾಗೂ ನನ್ನ ವಿರುದ್ಧ ಹಗುರವಾದ ಮಾತುಗಳನ್ನು ಆಡಿದ್ದಾರೆ. ನಾನು ಅನಕ್ಷರಸ್ಥ, ನೈತಿಕತೆ, ಯೋಗ್ಯತೆ ಇದೆಯಾ? ಎಂದು ಕೇಳಿದ್ದಾರೆ. ಅವರಲ್ಲಿ ನೈತಿಕತೆ ಇದ್ದಿದ್ದರೆ ಚುನಾವಣೆಗೂ ಮುನ್ನ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸೀರೆ ಹಂಚುತ್ತಿರಲಿಲ್ಲ ಎಂದು ಕುಟುಕಿದರು.

ಪದೇ ಪದೇ ಬೀದರ್‌–ಕಮಲನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆಯಾಗಿದೆ ಎಂದು ಖಂಡ್ರೆ ಹೇಳುತ್ತಿದ್ದಾರೆ. ಈ ರಸ್ತೆಗೆ ಟೆಂಡರ್‌ ಆದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈಶ್ವರ ಖಂಡ್ರೆ ಉಸ್ತುವಾರಿ ಸಚಿವರಾಗಿದ್ದರು. ನಿರ್ವಹಣೆಯ ಜವಾಬ್ದಾರಿ ರಾಜ್ಯ ಸರ್ಕಾರ ಹೊತ್ತುಕೊಂಡಿತ್ತು. ಆದರೆ, ಈಗ ಅವರೇ ಪದೇ ಪದೇ ಗುತ್ತಿಗೆದಾರರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಅವರಿಗೆ ಏನಾದರೂ ಅರಿವು, ತಿಳಿವಳಿಕೆ ಅಥವಾ ಯೋಗ್ಯತೆ ಇದೆಯೇ? 3.5 ಕಿ.ಮೀ. ಉದ್ದದ ಬೀದರ್‌ ‘ರಿಂಗ್‌ರೋಡ್‌’  ಟೆಂಡರ್‌ ರದ್ದುಪಡಿಸಿದ್ದು ಇದೇ ಖಂಡ್ರೆ. ಇವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬಜೆಟ್‌ನಲ್ಲಿ ಅದಕ್ಕೆ ಹಣ ಕೊಡಿಸಿಲ್ಲ. ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಸಿ.ಎಂ. ಇದ್ದಾಗ ₹200 ಕೋಟಿ ಕೊಟ್ಟು ಕಾಮಗಾರಿಗೆ ಚಾಲನೆ ಕೊಟ್ಟಿದ್ದರು. ಕನಿಷ್ಠ ಬಸವಕಲ್ಯಾಣದಲ್ಲಿ ಪ್ರವಾಸಿ ವಸತಿಗೃಹವಾದರೂ ಮಂಜೂರು ಮಾಡಿಸಬೇಕಿತ್ತು. ಇದು ಇವರ ಯೋಗ್ಯತೆನಾ? ಎಂದು ಕೇಳಿದರು.

ADVERTISEMENT

ಎಲ್ಲಾ ತಾಲ್ಲೂಕುಗಳಲ್ಲಿ ಕ್ರೀಡಾಂಗಣಳಿವೆ. ಭಾಲ್ಕಿಯಲ್ಲಿ ಕ್ರೀಡಾಂಗಣವೇ ಇಲ್ಲ. ನಿಮ್ಮ ಯೋಗ್ಯತೆ ಏನೆಂಬುದು ನಿಮಗೆ ಗೊತ್ತಾಗಬೇಕು. ಸಿಪೆಟ್‌ ಕುರಿತು ಮಾತನಾಡಿದ್ದಾರೆ. ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಹಾಲಹಳ್ಳಿ ಸಮೀಪದ ಬೀದರ್‌ ವಿಶ್ವವಿದ್ಯಾಲಯದಲ್ಲಿ ತರಬೇತಿ ಆರಂಭವಾಗಲಿದೆ. ಹತ್ತು ಎಕರೆ ಜಾಗ, ₹50 ಕೋಟಿ ಮಂಜೂರಾಗಿದೆ. ಇದಕ್ಕೆ ಬಜೆಟ್‌ನಲ್ಲಿ  ರಾಜ್ಯ ಸರ್ಕಾರ ಹಣವೇ ಕೊಟ್ಟಿಲ್ಲ. ನಿಮ್ಮ ಯೋಗ್ಯತೆ ಏನೆಂಬುದು ತೋರಿಸುತ್ತದೆ ಎಂದರು.

ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನನ್ನನ್ನು ಅಯೋಗ್ಯ ಎನ್ನುವುದು ಸರಿಯಲ್ಲ. ಜನರ ನಡುವೆ ಅಶಾಂತಿ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ಕರೆಂಟ್‌ ಬಿಲ್‌ ಹೆಚ್ಚಿಸಿರುವುದರಿಂದ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುತ್ತಿವೆ. ಬರುವ ದಿನಗಳಲ್ಲಿ ನಿರುದ್ಯೋಗ ಹೆಚ್ಚಾಗಬಹುದು. ತಿಳಿವಳಿಕೆ ಹೀನರಾಗಿದ್ದೀರಿ. ನನ್ನ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಅಭಿವೃದ್ಧಿ ಚಿಂತನೆ ಮಾಡಬಹುದು. ಆದರೆ, ಒಂಬತ್ತು ವರ್ಷಗಳಿಂದ ಅವರಲ್ಲಿ ಅದನ್ನು ಕಂಡಿಲ್ಲ. ಇಂತಹ ಹೀನ ಮನಸ್ಸಿನ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್‌, ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಮುಖಂಡರಾದ ಮಲ್ಲಿಕಾರ್ಜುನ, ರಾಜೇಂದ್ರ ಪೂಜಾರಿ, ಶ್ರೀನಿವಾಸ ಚೌಧರಿ, ಬಸವರಾಜ ಜೋಜನಾ, ರಾಜಶೇಖರ ನಾಗಮೂರ್ತಿ ಹಾಜರಿದ್ದರು.

‘ಜಿಲ್ಲಾ ಸಂಕೀರ್ಣಕ್ಕೆ 6 ತಿಂಗಳ ಹಿಂದೆಯೇ ಪ್ರಮಾಣ ಪತ್ರ’

‘ಬೀದರ್‌ ನಗರದ ಜಿಲ್ಲಾಧಿಕಾರಿ ಕಚೇರಿ ಇರುವ ಜಾಗದಲ್ಲಿ ಜಿಲ್ಲಾ ಆಡಳಿತದ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ಆರು ತಿಂಗಳ ಹಿಂದೆಯೇ ಪ್ರಮಾಣ ಪತ್ರ ಸಲ್ಲಿಸಿದೆ. ಅದನ್ನು ಅಲ್ಲಿಯೇ ಮಾಡಬೇಕಾಗಿದೆ. ಆ ಕೆಲಸ ಹಾಲಿ ಸರ್ಕಾರ ಮಾಡುತ್ತಿರುವುದನ್ನು ಸ್ವಾಗತಿಸುತ್ತೇನೆ’ ಎಂದು ಸಚಿವ ಭಗವಂತ ಖೂಬಾ ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹7 ಸಾವಿರ ಕೋಟಿ ಅನುದಾನ ರಾಜ್ಯ ಸರ್ಕಾರ ಕಡಿತಗೊಳಿಸಿದೆ. ಇದಕ್ಕೆ ಏನು ಹೇಳಬೇಕು. ಕೇಂದ್ರ ಸರ್ಕಾರ 29 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 81 ಕೋಟಿ ಜನರಿಗೆ ಅಕ್ಕಿ ನೀಡುತ್ತಿದೆ. ಹೀಗಿರುವಾಗ ರಾಜ್ಯಕ್ಕೆ ಮತ್ತೆ ಹೆಚ್ಚುವರಿ ಅಕ್ಕಿ ಕೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.