ಹೊಸಪೇಟೆ (ವಿಜಯನಗರ): ಬಿಜೆಪಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ನಮ್ಮ ಭೂಮಿ ನಮ್ಮ ಹಕ್ಕು‘ ಜನಜಾಗೃತಿ ಆಂದೋಲನದ ಭಾಗವಾಗಿ ಶುಕ್ರವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಮುಂಭಾಗ ಫುಟ್‌ಪಾತ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ದಿನವಿಡೀ ಪ್ರತಿಭಟನಾ ಧರಣಿ ನಡೆದಿದ್ದು, ವಕ್ಫ್ ಮಂಡಳಿಯಿಂದ ರೈತರಿಗೆ ಅನ್ಯಾಯ ಆಗಲು ಪಕ್ಷ ಬಿಡುವುದಿಲ್ಲ ಎಂಬ ಭರವಸೆ ನೀಡಲಾಯಿತು.
ಮಾಜಿ ಸಚಿವ ಬಿ.ಶ್ರೀರಾಮುಲು, ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಸಂಜೆ 4ರವರೆಗೆ ಧರಣಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜನರು ಬಂದು ತಮ್ಮ ಆಸ್ತಿ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿದ್ದನ್ನು ತೋರಿಸಿ ಅಳಲು ತೋಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಮಾತ್ರ ಹುಸಿಯಾಯಿತು.
ಬಿ.ಶ್ರೀರಾಮುಲು ಮಾತನಾಡಿ, ‘ಬಿಜೆಪಿ ರೈತರ ಪರವಾಗಿ ನಿಲ್ಲಲಿದೆ, ರೈತರಿಗಾಗಿ ನಾವು ರಕ್ತ ಕೊಟ್ಟೇವು, ರೈತರ ಒಂದಿಂಚು ಜಮೀನು ಸಹ ವಕ್ಫ್ ಮಂಡಳಿ ಪಾಲಾಗುವುದಕ್ಕೆ ಅವಕಾಶ ನೀಡೆವು’ ಎಂದು ಅವರು ಘೋಷಿಸಿದರು.
‘ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ರೈತರ ಬಲದ ಮುಂದೆ ಸರ್ಕಾರದ ಬಲ ಏನೇನೂ ಇಲ್ಲ. ಸರ್ಕಾರ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ದೊಡ್ಡ ಮಟ್ಟದ ಹೋರಾಟ ನಿಶ್ಚಿತ’ ಎಂದರು.
ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಸಂಡೂರು ಚುನಾವಣೆಯಲ್ಲಿ ತಮಗೆ ನಿಜವಾಗಿ ಎದುರಾಳಿ ಆಗಿದ್ದುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತು ತುಕಾರಾಂ, ಸಂತೋಷ್ ಲಾಡ್ ಅಲ್ಲ. ಸೋಲಿನ ಭಯದಿಂದಲೇ ಸಿಎಂ ಅಲ್ಲಿ ಮೂರು ದಿನ ಪ್ರಚಾರ ನಡೆಸಿದರು ಹಾಗೂ ಪ್ರತಿ ಬೂತ್‌ಗೆ ₹2ರಿಂದ ₹3 ಲಕ್ಷ ಹಣ ಹಂಚಿದ್ದರು. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದ ಕಾರಣ ಪ್ರಚಾರ ಸಭೆಗಳಿಗೆ ಜನ ಬರುತ್ತಿರಲಿಲ್ಲ, ಹೀಗಾಗಿ ದುಡ್ಡು ಕೊಟ್ಟು ಜನರನ್ನು ಸೇರಿಸುತ್ತಿದ್ದರು’ ಎಂದರು.
‘ಸಂಡೂರು ಚುನಾವಣೆಯಲ್ಲಿ ಸೋಲು, ಗೆಲುವಿನ ಪ್ರಶ್ನೆ ಬೇರೆ, ಅಲ್ಲಿ ಅತ್ಯುತ್ತಮ ಸ್ಪರ್ಧೆಯನ್ನು ನೀಡಿದ ತೃಪ್ತಿ ನನಗಿದೆ, ಹೊಸಪೇಟೆ ಭಾಗದ ಪಕ್ಷದ ನಾಯಕರು ಸಹ ನನಗಾಗಿ ಪ್ರಚಾರ ನಡೆಸಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ಚನ್ನಬಸವನಗೌಡ ಪಾಟೀಲ್ ಮಾತನಾಡಿ, ನೆಹರೂ ಕಾಲದಲ್ಲಿ ರಚನೆಯಾದ ವಕ್ಫ್ ಕಾಯ್ದೆಯನ್ನು ಇಂದು ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಮಾತ್ರ ಅನುಸರಿಸಲಾಗುತ್ತಿದೆ. ರೈತ ವಿರೋಧಿಯಾದ ಈ ಕಾನೂನಿಗೆ ತಿದ್ದುಪಡಿ ತರುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ, ಅದನ್ನು ರಾಜ್ಯ ಸರ್ಕಾರ ಬೆಂಬಲಿಸಿ ರೈತರ ಹಿತ ಕಾಪಾಡುವ ಕೆಲಸ ಮಾಡಬೇಕು ಎಂದರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ವಕ್ಫ್ ಮಂಡಳಿಯಿಂದ ರೈತರ ಜಮೀನು ಕಬಳಿಸುವ ಹುನ್ನಾರ ನಡೆದಿದೆ. ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್‌ನ ಗುಪ್ತ ಕಾರ್ಯಸೂಚಿ ವಿರುದ್ಧ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ’ ಎಂದರು.
ಬಳಿಕ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಕಳುಹಿಸಿಕೊಡಲಾಯಿತು.
ಪಕ್ಷದ ಮುಖಂಡರಾದ ಸಿದ್ಧಾರ್ಥ ಸಿಂಗ್, ಅಯ್ಯಾಳಿ ತಿಮ್ಮಪ್ಪ, ಜಂಬಯ್ಯ ನಾಯಕ, ಅಶೋಕ್ ಜೀರೆ, ಕೆ.ಎಸ್.ರಾಘವೇಂದ್ರ, ಬಲ್ಲಾಹುಣ್ಸಿ ರಾಮಣ್ಣ, ಸಂಜೀವ ರೆಡ್ಡಿ, ಕಿಚಿಡಿ ಕೊಟ್ರೇಶ್ ಇತರರು ಇದ್ದರು.
- ಸಲ್ಲಿಕೆಯಾಗದ ಅಹವಾಲು
ಹಗರಿಬೊಮ್ಮನಹಳ್ಳಿಯ ಶಾಲೆಯೊಂದಕ್ಕೆ ಸಂಬಂದಿಸಿದ ಪಹಣಿಯಲ್ಲಿ ವಕ್ಫ್ ಎಂಬ ಹೆಸರು ನಮೂದಾಗಿದೆ ಎಂಬ ಒಂದು ಅಹವಾಲು ಬಿಟ್ಟರೆ ಬೇರೆ ಯಾರೂ ಧರಣಿ ಸ್ಥಳದಲ್ಲಿ ಅಹವಾಲು ಸಲ್ಲಿಸಲಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು. ‘ಬಹುಶಃ ಜನರು ಇನ್ನೂ ಹೊಸ ಪಹಣಿ ಪಡೆದು ಪರೀಕ್ಷಿಸಿಕೊಂಡಿಲ್ಲ ಅನ್ನಿಸುತ್ತಿದೆ ಇನ್ನೂ ಸಮಯವಿದೆ ನಮ್ಮ ಸ್ಥಳೀಯ ಮುಖಂಡರಿಗೆ ನೀಡಿದರೆ ಕಾನೂನು ವಿಭಾಗ ಅದನ್ನು ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.