ADVERTISEMENT

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ | ಬಿಜೆಪಿಯಿಂದ ಪ್ರತಿಭಟನೆ; ಡಿಸಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 8:56 IST
Last Updated 28 ಜೂನ್ 2024, 8:56 IST
   

ಹೊಸಪೇಟೆ (ವಿಜಯನಗರ): ವಾಲ್ಮೀಕಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರ ಶರಣಪ್ರಕಾಶ್ ಪಾಟೀಲ್‌, ನಿಗಮದ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಸಿಬಿಐ ತನಿಖೆಗೆ ಒತ್ತಾಯಿಸಿ ಬಿಜೆಪಿ ವತಿಯಿಂದ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಇಲ್ಲಿನ ಸಾಯಿಬಾಬಾ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ರಸ್ತೆಯಲ್ಲೇ ಕುಳಿತು ಪ್ರತಿಭಟನಾ ಪ್ರದರ್ಶನ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ ಮಾತನಾಡಿ, ದಲಿತರು, ಹಿಂದುಳಿದವರ ಉದ್ಧಾರ ಮಾಡುವುದಾಗಿ ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ದುಡ್ಡನ್ನು ತಿಂದು ಹಾಕಿದೆ, ಇದರ ಜತೆಗೆ ಗ್ಯಾರಂಟಿ ಯೋಜನೆಗಾಗಿ ಎಸ್‌ಸಿಎಸ್‌ಪಿ, ಟಿಎಸ್‌ಪಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನೂ ಬೇರೆ ಉದ್ದೇಶಗಳಿಗೆ ವರ್ಗಾಯಿಸಿದೆ. ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದರು.

ADVERTISEMENT

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದವರ ದುಡ್ಡಿಗೇ ಕೈಹಾಕಿ ಮೋಸ ಮಾಡಿದೆ, ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಜತೆಗೆ ಹಲವರು ಶಾಮೀಲಾಗಿದ್ದಾರೆ, ಹೀಗಾಗಿ ನಾಗೇಂದ್ರ ಅವರ ತಲೆದಂಡದಿಂದ ಮಾತ್ರ ತಪ್ಪಿತಸ್ಥರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ, ಶಾಮೀಲಾದ ಎಲ್ಲರ ತಲೆದಂಡವೂ ಆಗಬೇಕು ಎಂದರು.

ನಾಯಕ ಸಮುದಾಯದ ಮುಖಂಡ ಜಂಬಯ್ಯ ನಾಯಕ ಮಾತನಾಡಿ, ಎಸ್‌ಟಿ ಸಮುದಾಯಕ್ಕೆ ಈ ಸರ್ಕಾರ ಘೋರ ಅನ್ಯಾಯ ಮಾಡಿದೆ, ಇದನ್ನು ಪ್ರಶ್ನಿಸಲೇಬೇಕಾಗಿದೆ ಎಂದರು.

ಯುವಮೋರ್ಚಾ ರಾಜ್ಯ ಘಟಕದ ಕೋಶಾಧ್ಯಕ್ಷ ಸಿದ್ಧಾರ್ಥ ಸಿಂಗ್, ಜಿಲ್ಲಾ ಘಟಕದ ಅಧ್ಯಕ್ಷ ಕಿಚಡಿ ಕೊಟ್ರೇಶ್‌, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪಕ್ಷದ ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಕೆ.ಎಸ್.ರಾಘವೇಂದ್ರ, ಶಂಕರ ಮೇಟಿ, ಸಂಜೀವ ರೆಡ್ಡಿ, ಜಗದೀಶ ಕಮಟಗಿ, ಅಶೋಕ್ ಜೀರೆ, ಕಾಸೆಟ್ಟಿ ಉಮಾಪತಿ, ರೇವಣಸಿದ್ದಪ್ಪ ಇತರರು ಇದ್ದರು.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಈ ಮೊದಲು ತಿಳಿಸಲಾಗಿತ್ತು. ಹೀಗಾಗಿ ಸ್ವತಃ ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಜಿಲ್ಲಾಧಿಕಾರಿ ಕಚೇರಿಯಲ್ಲೇ ಇದ್ದರು. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಕಾರ್ಯಕರ್ತರನ್ನು ಬಂಧಿಸಲು ವಾಹನಗಳನ್ನು ಸಜ್ಜಾಗಿ ಇರಿಸಲಾಗಿತ್ತು. ಆದರೆ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕದೆ, ಮನವಿ ಸಲ್ಲಿಕೆಗೆ ತಮ್ಮ ಪ್ರತಿಭಟನೆ ಸೀಮಿತಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.