ಹೊಸಪೇಟೆ(ವಿಜಯನಗರ): ‘ಕೋವಿಡ್‌ನಿಂದ ಸಾವನ್ನಪ್ಪಿದವರಲ್ಲಿ ಮಕ್ಕಳ ಪ್ರಮಾಣ ಬಹಳ ಕಡಿಮೆ ಇದೆ. ಪೌಷ್ಟಿಕ ಆಹಾರ ಸೇವನೆಯಿಂದ ಎಲ್ಲ ರೋಗಗಳಿಂದ ರಕ್ಷಿಸಿಕೊಳ್ಳಲು ಸಾಧ್ಯ. ಅದಕ್ಕಾಗಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಾಯಂದಿರು ವಿಶೇಷ ಗಮನ ಹರಿಸಬೇಕು’ ಎಂದು ಮಕ್ಕಳ ತಜ್ಞ ಡಾ. ಅಶೋಕ್ ದಾತಾರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಸಂಡೂರು ರಸ್ತೆ ವಿದ್ಯಾರ್ಥಿ ನಿಲಯದ ಆರೈಕೆ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಅಪೌಷ್ಟಿಕ ಮಕ್ಕಳ ಎರಡನೇ ತಂಡದ ಬಾಲಚೈತನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಬಾಲಚೈತನ್ಯ ಕಾರ್ಯಕ್ರಮದಿಂದ ಅನೇಕ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಉಂಟಾಗಿದೆ. ಅದನ್ನು ನೋಡಿ ಇತರೆ ತಾಯಂದಿರು ಮಕ್ಕಳನ್ನು ಕೇಂದ್ರಕ್ಕೆ ಕರೆದುಕೊಂಡು ಬರುತ್ತಿರುವುದು ಸಂತೋಷದ ವಿಚಾರ. ಮಕ್ಕಳಿಗೆ ಯಾವ ರೀತಿಯ ಪೌಷ್ಟಿಕ ಆಹಾರ ನೀಡಬೇಕು ಎಂಬ ಅರಿವು ತಾಯಂದಿಯರಲ್ಲಿ ಬಂದಿದೆ. ಎರಡನೇ ತಂಡದ ತಾಯಂದಿರಿಗೂ ಅದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು’ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್, ‘ಪ್ರತಿ ತಾಯಿಯು ಪೌಷ್ಟಿಕ ಆಹಾರವನ್ನು ಸೇವಿಸಿದಾಗ ಮಗುವಿನ ಬೆಳವಣಿಗೆಯೂ ಉತ್ತಮವಾಗಿ ಆಗುತ್ತದೆ. 14 ದಿನ ನಡೆಯಲಿರುವ ಬಾಲಚೈತನ್ಯ ಕಾರ್ಯಕ್ರಮದಲ್ಲಿ ಸೂಕ್ತ ಮಾಹಿತಿ ಪಡೆದು, ಮನೆಯಲ್ಲೇ ಅದೇ ರೀತಿ ನಡೆದುಕೊಳ್ಳಬೇಕು. ಆರೈಕೆ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡ ಮಕ್ಕಳಿಗೆ ಸಚಿವರು ವೈಯಕ್ತಿಕವಾಗಿ ₹25 ಸಾವಿರ ಮೊತ್ತದ ಪೌಷ್ಟಿಕ ಆಹಾರದ ಕಿಟ್ ವಿತರಿಸಲು ನಿರ್ಧರಿಸಿದ್ದಾರೆ’ ಎಂದರು.
‘ಆರೈಕೆ ಕೇಂದ್ರದಲ್ಲಿ ಮಕ್ಕಳ ವಯಸ್ಸು, ತೂಕ, ಎತ್ತರಕ್ಕೆ ಅನುಗುಣವಾಗಿ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತದೆ. ಪ್ರತಿದಿನ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಬಾರಿ ಕಂಪ್ಲಿ ತಾಲ್ಲೂಕಿನಿಂದಲೂ ಮಕ್ಕಳು ಆರೈಕೆ ಕೇಂದ್ರಕ್ಕೆ ಬಂದಿದ್ದಾರೆ. ಒಟ್ಟು 38 ಮಕ್ಕಳು ನೋಂದಣಿಯಾಗಿದ್ದಾರೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ್ ತಿಳಿಸಿದರು.
ಆರೋಗ್ಯ ಇಲಾಖೆಯ ಡಾ.ನಾಗೇಂದ್ರ, ಡಾ.ಶ್ರೀನಿವಾಸ್, ಮಕ್ಕಳ ತಜ್ಞರ ಸಮಿತಿಯ ಡಾ.ರಾಜೀವ್, ಡಾ.ದೀಪಾ, ಇಲಾಖೆಯ ತಾಲ್ಲೂಕು ಸಂಯೋಜಕ ನೀಲಕಂಠ, ರಾಘವೇಂದ್ರ, ಫಾತೀಮಾ, ಕೆ.ನಾಗರತ್ನಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.