ADVERTISEMENT

ವಿಜಯನಗರ | ಬಾಲಕನ ಅಪಹರಣ, ಕಾಲುವೆಗೆ ಎಸೆದು ಕೊಲೆ: ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 7:58 IST
Last Updated 26 ಅಕ್ಟೋಬರ್ 2024, 7:58 IST
<div class="paragraphs"><p>ಓಬಳೇಶ್‌</p></div>

ಓಬಳೇಶ್‌

   

ಹೊಸಪೇಟೆ (ವಿಜಯನಗರ): ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಳು ವರ್ಷದ ಬಾಲಕನನ್ನು ಅಪಹರಿಸಿ, ಎಚ್‌ಎಲ್‌ಸಿ ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ನಡೆದಿದ್ದು, ಆರೋಪಿ ಓಬಳೇಶ್‌ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಮಲಾಪುರದ ಗೋನಾಳ್‌ ಕೇರಿಯ ಬಾಲಕ ಅಭಿ (7) ಎಂಬಾತನನನ್ನು ಆರೋಪಿ ಇದೇ 22ರಂದು ಶಾಲೆಯಿಂದ ಅಪಹರಿಸಿದ್ದ. ಬಳಿಕ ಎಚ್‌ಎಲ್‌ಸಿ ಕಾಲುವೆಯ ಮೇಲಿನ ಸೇತುವೆಯಿಂದ ಬಾಲಕನನ್ನು ಕಾಲುವೆಗೆ ಎಸೆದಿದ್ದ. ಅದೇ ದಿನ ಬಾಲಕ ನಾಪತ್ತೆಯಾದ ಕುರಿತು ಆತನ ತಾಯಿ ಕಮಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ADVERTISEMENT

ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಬಾಲಕನ ಮೃತದೇಹ ಶುಕ್ರವಾರ ಕುರೇಕುಪ್ಪ ಬಳಿ ಕಾಲುವೆಯಲ್ಲಿ ಪತ್ತೆಯಾಗಿತ್ತು.

‘ಬಳಿಕ ಆರೋಪಿಗಾಗಿ ಹುಡುಕಾಟ ನಡೆಯಿತು. 22ರಂದು ಬಾಲಕನನ್ನು ಆರೋಪಿ ಓಬಳೇಶನೇ ಶಾಲೆಗೆ ಬಿಟ್ಟುಬರುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಕೂರಿಸಿಕೊಂಡು ಹೋಗಿದ್ದ. ಆತನ ಚಲನವಲನಗಳ ಬಗ್ಗೆ ಸಿ.ಸಿ.ಟಿ.ವಿ. ದೃಶ್ಯಗಳನ್ನು ಗಮನಿಸಿದಾಗ ಶಾಲೆಯಿಂದ ಬಾಲಕನನ್ನು ಮತ್ತೆ ತನ್ನ ಜತೆ ಕರೆತಂದಿದ್ದು ಕಾಣಿಸಿತ್ತು. ಇದರ ಜಾಡು ಹಿಡಿದು ಆತನನ್ನು ವಿಚಾರಿಸಿದಾಗ ತಾನೇ ಬಾಲಕನನ್ನು ಪಿ.ಕೆ.ಹಳ್ಳಿ ರಸ್ತೆಯ ಅಡವಿ ಕೆನಾಲ್‌ನಲ್ಲಿ (ಎಚ್‌ಎಲ್‌ಸಿ ಕಾಲುವೆ) ಎಸೆದಿದ್ದಾಗಿ ಒಪ್ಪಿಕೊಂಡ’ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌.‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದ್ದರಿಂದ ಕೊಲೆ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವುದು ಸಾಧ್ಯವಾಯಿತು, ವಿಳಂಬವಾಗಿದ್ದಲ್ಲಿ ಆತ ಇಲ್ಲಿಂದ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ಗಳತ್ತ ಪಲಾಯನ ಮಾಡುವ ಯೋಜನೆ ರೂಪಿಸಿದ್ದ’ ಎಂಧು ಅವರು ಹೇಳಿದರು.

ಸಂಬಂಧಕ್ಕೆ ಬಾಲಕ ಅಡ್ಡಿ?: ‘ಮೃತ ಬಾಲಕನ ತಾಯಿ ಮತ್ತು ಓಬಳೇಶ ನಡುವೆ ಅನ್ಯೋನ್ಯತೆ ಇತ್ತು. ಶೀಘ್ರದಲ್ಲೇ ಮೊದಲ ಪತಿಗೆ ವಿಚ್ಛೇದನ ನೀಡಿ ಓಬಳೇಶ್ ಜತೆಗೆ ಮದುವೆ ಮಾಡುವ ತಯಾರಿಯಲ್ಲಿ ಇದ್ದಳು. ಈ ಸಂಬಂಧಕ್ಕೆ ಬಾಲಕ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಓಬಳೇಶ್ ಆತನನ್ನು ಮುಗಿಸುವ ಯೋಚನೆ ಮಾಡಿದಂತಿದೆ. ಆದರೆ ಮಗುವನ್ನು ಕೊಲ್ಲುವ ಯೋಚನೆ ತಾಯಿಗೆ ಇರಲಿಲ್ಲ, ಸ್ವತಃ ಆಕೆಯೇ ನಾಪತ್ತೆ ದೂರು ದಾಖಲಿಸಿದ್ದಲ್ಲದೆ, ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಓಬಳೇಶನ ಉದ್ದೇಶ ಕೇಳಿ ಆಘಾತಗೊಂಡಿದ್ದರು. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಎಸ್‌ಪಿ ಹೇಳಿದರು.

ಅಭಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.