ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಪಟ್ಟಣದಲ್ಲಿ ಪ್ರತಿದಿನ ಮನೆ ಮನೆಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಹಂಚುತ್ತಿದ್ದ ಹುಡುಗ ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದು ಶೈಕ್ಷಣಿಕ ಸಾಧನೆ ಮೆರೆದಿದ್ದಾನೆ.
ತಾಲ್ಲೂಕಿನ ತಿಪ್ಪಾಪುರ ಗ್ರಾಮದ ವಿಕಾಸ್ ಮಂತ್ರೋಡಿ ಕಲಾ ವಿಭಾಗದಲ್ಲಿ 4100 ಅಂಕಗಳಿಗೆ 3766 ಅಂಕ ಗಳಿಸಿ ಮೊದಲ ರ‍್ಯಾಂಕ್ ಮುಡಿಗೇರಿಸಿಕೊಂಡಿದ್ದಾನೆ. ವಿದ್ಯಾಭ್ಯಾಸ ಖರ್ಚಿಗಾಗಿ ಪ್ರತಿದಿನ ಬೆಳಗಿನ ಜಾವ 3 ಕಿ.ಮೀ. ದೂರದ ತಮ್ಮ ಗ್ರಾಮದಿಂದ ಪಟ್ಟಣಕ್ಕೆ ಬಂದು ಮನೆ ಮನೆಗೆ ಪತ್ರಿಕೆ ಹಂಚುತ್ತಿದ್ದ ವಿಕಾಸ್, ಮೊದಲ ರ‍್ಯಾಂಕ್ ಸಾಧನೆ ಮಾಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.
ಇದೇ ಗ್ರಾಮದ ಮತ್ತೊಬ್ಬ ವಿದ್ಯಾರ್ಥಿ ಶಿವಕುಮಾರ್ ಎಂ. ವಡ್ಡರ್ ಕಲಾ ವಿಭಾಗದಲ್ಲಿ 3666 ಅಂಕ ಪಡೆದು 10ನೇ ರ‍್ಯಾಂಕ್ ಪಡೆದಿದ್ದಾರೆ. ಕಾಲೇಜು ರಜೆ ದಿನಗಳಲ್ಲಿ ಕೂಲಿ ಕೆಲಸ ಮಾಡುವ ಶಿವಕುಮಾರ್ ಬಡತನದ ನಡುವೆಯೂ ಕಷ್ಟಪಟ್ಟು ಓದಿ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.
ರ‍್ಯಾಂಕ್ ಪಡೆದಿರುವ ಇಬ್ಬರೂ ಇಲ್ಲಿನ ಜಿಬಿಆರ್ ಮಹಾವಿದ್ಯಾಲಯ ವಿದ್ಯಾರ್ಥಿಗಳಾಗಿದ್ದಾರೆ. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಜಿಬಿಆರ್ ಕಾಲೇಜಿಗೆ ಗ್ರಾಮೀಣ ವಿದ್ಯಾರ್ಥಿಗಳಿಬ್ಬರು ರ‍್ಯಾಂಕ್ ಕೊಡುಗೆ ನೀಡುವ ಮೂಲಕ ಕಾಲೇಜಿನ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.
‘ಪತ್ರಿಕೆ ಹಂಚಿ ಶಿಕ್ಷಣದ ಖರ್ಚನ್ನು ನಾನೇ ಸಂಪಾದಿಸುತ್ತಿದ್ದೆ. ಮೊಬೈಲ್, ಜಾಲತಾಣಗಳಿಂದ ದೂರವಾಗಿ ಕಷ್ಟಪಟ್ಟ ಅಧ್ಯಯನ ಮಾಡುತ್ತಿದ್ದೆ. ಗ್ರಂಥಾಲಯದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೆ. ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರ ಮಾರ್ಗದರ್ಶನದಲ್ಲಿ ರ‍್ಯಾಂಕ್ ಸಾಧನೆ ಸಾಧ್ಯವಾಯಿತು. ಸದ್ಯ ಬೆಂಗಳೂರು ವಿಶ್ವವಿದ್ಯಾಯಲದಲ್ಲಿ ಎಂ.ಎ. ಓದುತ್ತಿದ್ದು, ಐಎಎಸ್ ಗುರಿ ಹೊಂದಿದ್ದೇನೆ’ ಎಂದು ವಿಕಾಸ್ ಮಂತ್ರೋಡಿ ಹೇಳಿದರು.
‘ಕಾಲೇಜಿನ ಸುವರ್ಣ ಸಂಭ್ರಮಕ್ಕೆ ಇಬ್ಬರು ವಿದ್ಯಾರ್ಥಿಗಳು ರ‍್ಯಾಂಕ್ ಸಾಧನೆ ಮಾಡಿ ಮೆರಗು ಹೆಚ್ಚಿಸಿದ್ದಾರೆ. ಕೂಲಿ ಕೆಲಸದ ನಡುವೆಯೂ ಗ್ರಾಮಾಂತರ ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿ ಸಾಧನೆ ಯಾರ ಸ್ವತ್ತೂ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಅವರ ಬಗ್ಗೆ ನಾವು ಹೊಂದಿದ್ದ ನಿರೀಕ್ಷೆ ಸಾಕಾರಗೊಂಡಿದೆ’ ಎಂದು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.