ADVERTISEMENT

ವಿಜಯನಗರ | ಜಿಲ್ಲೆಯಲ್ಲಿ ಎಲ್ಲ ಬಿಪಿಎಲ್ ಕಾರ್ಡ್‌ ಮರುಚಾಲನೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 16:09 IST
Last Updated 25 ನವೆಂಬರ್ 2024, 16:09 IST
ಎಂ.ಎಸ್‌.ದಿವಾಕರ್‌
ಎಂ.ಎಸ್‌.ದಿವಾಕರ್‌   

ಹೊಸಪೇಟೆ (ವಿಜಯನಗರ): ಬಿಪಿಎಲ್ ಮಾನದಂಡಗಳ ಪೈಕಿ ₹1.20 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ವರಮಾನವನ್ನು ಹೊಂದಿರುವ ತಂತ್ರಾಂಶದ ಮಾಹಿತಿಯನ್ನಾಧರಿಸಿ ಜಿಲ್ಲೆಯಲ್ಲಿ 9,326 ಕಾರ್ಡುಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿತ್ತು, ಅಂತಹ ಕಾರ್ಡ್ ಸಹಿತ ಎಲ್ಲ ಬಿಪಿಎಲ್ ಕಾರ್ಡ್‌ಗಳಿಗೆ ಪುನರ್ ಚಾಲನೆ ನೀಡಲಾಗಿದೆ.

ಸರ್ಕಾರದ ಆದೇಶದಂತೆ ಎಲ್ಲಾ ರದ್ದಾಗಿರುವ ಕಾಡುಗಳನ್ನು ಪುನರ್ ಚಾಲನೆ ನೀಡಲಾಗಿದ್ದು, ಸದರಿ ಕಾರ್ಡುದಾರರು ಎಂದಿನಂತೆ ಪಡಿತರ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರು ತಿಂಗಳಿಂದ ಪಡಿತರ ಪಡೆಯದೇ ಇರುವ 5,148 ಪಡಿತರ ಚೀಟಿಗಳನ್ನು ಅಮಾನತ್ತಿನಲ್ಲಿ ಇಡಲಾಗಿದ್ದು, ಅದನ್ನು ಸಹ ಚಾಲನೆಗೊಳಿಸಲಾಗಿದೆ. ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದೆಲ್ಲ ಮಾನದಂಡಗಳನ್ನು ಮಾನದಂಡಗಳ ಆಧಾರದ ಮೇಲೆ ಪಡಿತರ ಚೀಟಿಗಳ ಪರಿಷ್ಕರಣೆಯನ್ನು ಸರ್ಕಾರ ತಾತ್ಕಾಲಿಕವಾಗಿ ಹಿಂಪಡೆದಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಆದಾಯ ತೆರಿಗೆ ಪಾವತಿದಾರರೆಂಬ ಕಾರಣಕ್ಕೆ 1,031 ಕಾರ್ಡುಗಳನ್ನು ಅಮಾನತಿನಲ್ಲಿ ಇಡಲಾಗಿತ್ತು ಅವುಗಳನ್ನು ಸಹ ತಾತ್ಕಾಲಿಕವಾಗಿ ಪುನರ್‌ ಚಾಲನೆಗೊಳಿಸಲಾಗಿದೆ. ಆದರೆ ಇಂತಹ ಕಾರ್ಡುಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ಮಾಡಲು ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳನ್ನು ಮುಂದುವರಿಸಿ ಅನರ್ಹ ಕಾರ್ಡುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರಾಗಿರುವ ಕಾರಣಕ್ಕೆ ಒಟ್ಟು 101 ಪಡಿತರ ಚೀಟಿಗಳನ್ನು ಬಿಪಿಎಲ್‌ನಿಂದ ಎಪಿಎಲ್‌ ಆಗಿ ಬದಲಾವಣೆ ಮಾಡಲಾಗಿದ್ದು, ಈ ಕಾರ್ಡುಗಳ ಮುಖ್ಯಸ್ಥರಿಗೆ/ನೌಕರರಿಗೆ ನಿಯಮಾನುಸಾರ ನೋಟೀಸ್‌ ನೀಡಿ ದಂಡ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಮಾನದಂಡಳ ಹೊರಗಿದ್ದು ಅನಧಿಕೃತವಾಗಿ ಪಡಿತರ ಚೀಟಿಯನ್ನು ಹೊಂದಿರುವವರು ಕೂಡಲೇ ಕೂಡಲೇ ತಮ್ಮ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.