ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆ ಹಾಗೂ ಬಲದಂಡೆ ಕಾಲುವೆಗಳ ಸಂಪೂರ್ಣ ನಿರ್ವಹಣೆಯ ಹೊಣೆ ಹೊತ್ತಿರುವ ತುಂಗಭದ್ರಾ ಮಂಡಳಿಯ (ಟಿ.ಬಿ.ಬೋರ್ಡ್) ಅಧ್ಯಕ್ಷ ಎಸ್.ಎನ್.ಪಾಂಡೆ ಅವರು ಮಂಗಳವಾರ ಅಣೆಕಟ್ಟೆಗೆ ಭೇಟಿ ನೀಡಿದ್ದು, ತಾತ್ಕಾಲಿಕ ಗೇಟ್ ಸಹಿತ ಎಲ್ಲಾ ಕ್ರಸ್ಟ್‌ಗೇಟ್‌ಗಳ ಪರಿಶೀಲನೆ ನಡೆಸಿದರು.
70 ವರ್ಷಗಳಷ್ಟು ಹಳೆಯದಾದ ಅಣೆಕಟ್ಟೆಗೆ ನಿರ್ಮಿಸಲಾಗಿರುವ ಕ್ರಸ್ಟ್‌ಗೇಟ್‌ಗಳನ್ನು ಒಮ್ಮೆಯೂ ಬದಲಾಯಿಸಿಲ್ಲ, ಎಲ್ಲಾ 33 ಗೇಟ್‌ಗಳಿಗೆ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕು ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್ ನೇತೃತ್ವದ ತಜ್ಞರ ತಂಡ ತನ್ನ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಡಳಿಯ ಅಧ್ಯಕ್ಷರ ಈ ಭೇಟಿ ಮತ್ತು ಪರಿಶೀಲನೆಗೆ ವಿಶೇಷ ಮಹತ್ವ ನೀಡಲಾಗಿದೆ.
ಪಾಂಡೆ ಅವರು ಮಂಗಳವಾರ ಬೆಳಿಗ್ಗೆ ಎಚ್‌ಎಲ್‌ಸಿ ಕಾಲುವೆಯ ಸ್ಥಿತಿಗತಿ ಪರಿಶೀಲಿಸಿದ್ದರು ಹಾಗೂ ತೋರಣಗಲ್ ತನಕ ತೆರಳಿ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿದ್ದರು. ಸಂಜೆ ತುಂಗಭದ್ರಾ ಅಣೆಕಟ್ಟೆಗೆ ಬಂದ ಅವರು ತುಂಬಿ ತುಳುಕುತ್ತಿರುವ ಜಲಾಶಯ, ಕ್ರಸ್ಟ್‌ಗೇಟ್‌ಗಳ ಸ್ಥಿತಿಗತಿ ಕುರಿತಂತೆ ಮಾಹಿತಿ ಪಡೆದರು. ಉದ್ಯಾನ, ಜಿಂಕೆ ಪಾರ್ಕ್‌ಗಳಿಗೂ ಭೇಟಿ ನೀಡಿ ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷರ ಜತೆಯಲ್ಲಿ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಕಾರ್ಯನಿರ್ವಾಹಕ ಎಂಜಿನಿಯರ್ ರವಿಚಂದ್ರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜ್ಞಾನೇಶ್ವರ, ಎಸ್‌ಡಿಒ ರಾಘವೇಂದ್ರ ಇದ್ದರು.
ಹಿನ್ನೆಲೆ: ಆಗಸ್ಟ್ 10ರಂದು ರಾತ್ರಿ 19ನೇ ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿಹೋಗಿತ್ತು. ಆ.16ರಂದು ಹರಿಯುತ್ತಿದ್ದ ನೀರಲ್ಲೇ ತಾತ್ಕಾಲಿಕ ಗೇಟ್‌ನ ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಆ.17ರಂದು ಗೇಟ್ ಅಳವಡಿಕೆ ಪೂರ್ಣಗೊಂಡಿತ್ತು. ಸೆ.9 ಮತ್ತು 10ರಂದು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ತಂಡದಲ್ಲಿ ಎ.ಕೆ.ಬಜಾಜ್ ಅವರಲ್ಲದೆ, ಕೇಂದ್ರ ಜಲ ಆಯೋಗದ ನಿವೃತ್ತ ನಿರ್ದೇಶಕ ಹರ್ಕೇಶ್ ಕುಮಾರ್, ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ ಕಂಪನಿಯ ನಿವೃತ್ತ ಅಧಿಕಾರಿ ಸುಧಾಕರ್ ತಾರಾಪುರಂ, ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಸಿದ್ದಗಂಗಪ್ಪ, ಅನಂತಪುರದ ಮುಖ್ಯ ಎಂಜಿನಿಯರ್ ನಾಗರಾಜು ಮತ್ತು ತೆಲಂಗಾಣದ ಮುಖ್ಯ ಎಂಜಿನಿಯರ್ ಬಾಲಮುರಳಿ ಕೃಷ್ಣ ಇದ್ದರು. ಸೆ.29ರಂದು ತಂಡ ಮಂಡಳಿಗೆ ತನ್ನ ವರದಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.