ADVERTISEMENT

ಹೊಸ ಜಿಲ್ಲೆ ವಿಜಯನಗರಕ್ಕೆ ಉಸ್ತುವಾರಿ ಜಮೀರ್ ಅಹ್ಮದ್‌ಗೆ ಸವಾಲು

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 16:20 IST
Last Updated 9 ಜೂನ್ 2023, 16:20 IST
ಜಮೀರ್‌ ಅಹ್ಮದ್‌ ಖಾನ್‌
ಜಮೀರ್‌ ಅಹ್ಮದ್‌ ಖಾನ್‌   

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ವಸತಿ, ವಕ್ಫ್  ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ನಿಯುಕ್ತರಾಗಿದ್ದು, ಒಂದೂವರೆ ವರ್ಷದ ಹಿಂದೆ ಹೊಸ ಜಿಲ್ಲೆಯಾಗಿ ರೂಪುಗೊಂಡಿರುವ ವಿಜಯನಗರಕ್ಕೆ ಮೂಲಸೌಕರ್ಯಗಳನ್ನು ಒದಗಿಸುವ ದೊಡ್ಡ ಸವಾಲಿನ ಮುಂದೆ ನಿಂತಿದ್ದಾರೆ.

ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ಒಳಗೊಂಡ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಹಲವಾರು ಮೂಲಸೌಲಭ್ಯಗಳು ಇನ್ನೂ ರೂಪುಗೊಂಡಿಲ್ಲ. ಮುಖ್ಯವಾಗಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲನ್ನೇ ಹಾಕಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಎಸ್‌ಪಿ ಕಚೇರಿ ಸಿದ್ಧಗೊಳ್ಳುತ್ತಿದೆ. ಉಪವಿಭಾಗಾಧಿಕಾರಿ ಕಚೇರಿ, ಇತರ ಹಲವು ಇಲಾಖೆಗಳಿಗೆ ಹೊಸ ರೂಪ ಸಿಗಬೇಕಿದೆ.

‘ಹೊಸ ಜಿಲ್ಲೆಗೆ ಹಲವು ಮೂಲಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಇದರ ಬಗ್ಗೆ ಸಚಿವರು ಈಗಾಗಲೇ ಪ್ರಾಥಮಿಕ ಹಂತದ ಸಮಾಲೋಚನೆ ನಡೆಸಿದ್ದಾರೆ’ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

ADVERTISEMENT

ಬಳ್ಳಾರಿ–ವಿಜಯನಗರ ಜಿಲ್ಲೆಗಳನ್ನು ಮತ್ತೆ ಒಂದುಗೂಡಿಸುವ ಬಗ್ಗೆ ಈಚೆಗೆ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿಕೆ ನೀಡಿದ್ದರು. ಆದರೆ ಇದು ಸಾಧ್ಯವೇ ಇಲ್ಲದ ಮಾತಾಗಿದ್ದು, ಇನ್ನೇನಿದ್ದರೂ ವಿಜಯನಗರ ಜಿಲ್ಲೆಯ ಮೂಲಸೌಕರ್ಯ ವೃದ್ಧಿಯ ಬಗ್ಗೆ ಮಾತುಕತೆ ಮಾತ್ರ ಎಂಬ ಸ್ಪಷ್ಟ ನಿಲುವನ್ನು ಸಚಿವ ಜಮೀರ್ ಅಹ್ಮದ್‌ ತಳೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಜೆಡಿಎಸ್‌ ಕಟ್ಟಾಳು, ಈಗ ಸಿದ್ದರಾಮಯ್ಯ ಆಪ್ತ: ಜಮೀರ್ ಅಹ್ಮದ್ ಖಾನ್‌ ಅವರು ಮೂಲತಃ ಜೆಡಿಎಸ್ ಪಕ್ಷದಲ್ಲಿದ್ದವರು. 2006ರಲ್ಲಿ ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಆಗ ಸಾರಿಗೆ ಸಚಿವರಾಗಿದ್ದರು. 2016ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ  ಮತದಾನ ಮಾಡಿದ ಬಳಿಕ ಅವರು ಕಾಂಗ್ರೆಸ್ ಸೇರಿದ್ದು, ಇದೀಗ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದಾರೆ. 2018ರಲ್ಲಿ ರಚನೆಯಾದ ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವೇಳೆ ಅವರು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ವಿಜಯನಗರ ಜಿಲ್ಲೆಯ ಎಲ್ಲಾ ಶಾಸಕರೊಂದಿಗೂ ಉತ್ತಮ ಸಂಬಂಧ ಇಟ್ಟುಕೊಂಡಿರುವ ಜಮೀರ್ ಅಹ್ಮದ್ ಖಾನ್‌ ಅವರು, ಹೊಸ  ಜಿಲ್ಲೆಗೆ ವಿಶೇಷ ಕೊಡುಗೆ ನೀಡಬಹುದೇ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

ಪ್ರಾಮಾಣಿಕವಾಗಿ ಶ್ರಮಿಸುವ ಭರವಸೆ

ವಿಜಯನಗರ ಜಿಲ್ಲೆ ಉಸ್ತುವಾರಿ ವಹಿಸಿರುವುದಕ್ಕೆ ಸಚಿವ ಜಮೀರ್ ಅಹಮದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ’ನೂತನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಮಸ್ತ ಜಿಲ್ಲೆಯ ಜನತೆ ಜನ ಪ್ರತಿನಿಧಿ ಸಂಘ ಸಂಸ್ಥೆಗಳನ್ನು ವಿಶಾಸಕ್ಕೆ ತೆಗೆದುಕೊಂಡು ಸಮನ್ವಯ ಸಹಕಾರದೊಂದಿಗೆ ಜಿಲ್ಲೆಗೆ ಹೊಸ ಸ್ಪರ್ಶ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ‘ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.