ADVERTISEMENT

ಹೊಸಪೇಟೆ | ನಗರ ರಸ್ತೆ ಗುಡಿಸಲು ಅಗ್ಗದ ಯಂತ್ರ: ನಿರ್ವಹಣೆಯೂ ಸುಲಭ

ಎಂ.ಜಿ.ಬಾಲಕೃಷ್ಣ
Published 4 ಜುಲೈ 2024, 5:07 IST
Last Updated 4 ಜುಲೈ 2024, 5:07 IST
ರಸ್ತೆ ಗುಡಿಸುವ ಯಂತ್ರದ ಪರಿಶೀಲನೆ ನಡೆಸುತ್ತಿರುವ ಸಿಬ್ಬಂದಿ
ರಸ್ತೆ ಗುಡಿಸುವ ಯಂತ್ರದ ಪರಿಶೀಲನೆ ನಡೆಸುತ್ತಿರುವ ಸಿಬ್ಬಂದಿ    

ಹೊಸಪೇಟೆ (ವಿಜಯನಗರ): ನಗರದಲ್ಲಿ ರಸ್ತೆ ಗುಡಿಸಲು ‘ಐ ಕ್ಲೀನ್‌ಎಕ್ಸ್’ ಎಂಬ ಯುಂತ್ರವನ್ನು ಪ್ರಕಾಶ್‌ ಹೊಸದುರ್ಗ ಅವರ ಟ್ರಯಾಂಗಲ್‌ ಇನ್ನೋವೇಷನ್ಸ್‌ ಸಂಸ್ಥೆಯು ಅನ್ವೇಷಿಸಿದ್ದು, ಅದನ್ನು ಹೊಸಪೇಟೆ ನಗರಸಭೆ ಅಳವಡಿಸಿಕೊಂಡಿದೆ.

₹20 ಸಾವಿರ ಮೌಲ್ಯದ ‘ಐ ಕ್ಲೀನ್‌ಎಕ್ಸ್’ ಯಂತ್ರಕ್ಕೆ ಬ್ಯಾಟರಿ ಮತ್ತು ಪೆಟ್ರೋಲ್‌ ಅಗತ್ಯವಿಲ್ಲ. ತಳ್ಳುತ್ತ ಸಾಗಿದಂತೆ ಎರಡು ಬ್ರಷ್‌ಗಳು ಕಸ, ದೂಳು, ಮರಳು, ಮಣ್ಣು, ಎಲೆ, ಪ್ಲಾಸ್ಟಿಕ್‌ ಗುಡಿಸುತ್ತವೆ. ಯಂತ್ರದಲ್ಲಿ ಅಳವಡಿಸಿರುವ ರೋಲರ್‌ ಅವುಗಳನ್ನು ಹೀರಿ ಡಬ್ಬದಲ್ಲಿ ಶೇಖರಿಸುತ್ತದೆ. ಹೀಗೆ ಒಟ್ಟು 50 ಕೆಜಿಯಷ್ಟು ಶೇಖರಿಸಿಡಬಹುದು.

₹ 500 ಮೌಲ್ಯದ 500 ಮಿ.ಮೀ.ಗಾತ್ರದ ಬ್ರಷ್‌ಗಳನ್ನು 6 ತಿಂಗಳಿಗೆ ಒಮ್ಮೆ ಬದಲಿಸಿದರೆ ಸಾಕು. ನಗರದ ಪ್ರಮುಖ ರಸ್ತೆಗಳ ದೂಳು, ಕಸ ತೆಗೆಯಲು ಇದು ಸದ್ಯದ ಮಟ್ಟಿಗೆ ಅತ್ಯಂತ ಕಡಿಮೆ ವೆಚ್ಚದ ಸಾಧನ ಎಂದು ಹೇಳಲಾಗುತ್ತಿದೆ.

ADVERTISEMENT

‘ಈ ಯಂತ್ರವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ಸದ್ಯ 20 ಯಂತ್ರಗಳನ್ನು ಖರೀದಿಸಲಾಗಿದೆ. ವಿಜಯನಗರ ಜಿಲ್ಲೆಯಾದ್ಯಂತ ನಗರ, ಪಟ್ಟಣ ಪ್ರದೇಶಗಳಲ್ಲಿ ಇದನ್ನು ಅಳವಡಿಸುವ ಉದ್ದೇಶವಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಗಳ ಕಾಂಕ್ರೀಟ್‌ ರಸ್ತೆ, ಮುಖ್ಯರಸ್ತೆ, ಇಂಟರ್‌ಲಾಕ್‌ ಅಳವಡಿಸಿದ ಉದ್ಯಾನಗಳು ಹಾಗೂ ಉತ್ತಮ ಗುಣಮಟ್ಟದ ಎಲ್ಲಾ ರಸ್ತೆ, ನೆಲಗಳಲ್ಲಿ ಈ ಯಂತ್ರ ಬಳಸಬಹುದು’ ಎಂದರು.

ಹೊಸಪೇಟೆ ನಗರಸಭೆಯಿಂದ ಖರೀದಿಸಲಾದ ಹೊಸ ಕಸ ಗುಡಿಸುವ ಯಂತ್ರಗಳು
10 ನಿಮಿಷದಲ್ಲಿ 100 ಮೀಟರ್ ಸ್ಥಳ ಸ್ವಚ್ಛ
‘ಐ ಕ್ಲೀನ್‌ಎಕ್ಸ್‌’ ಯಂತ್ರ ನಿರ್ವಹಣೆಗೆ ಒಬ್ಬ ಕಾರ್ಮಿಕ ಸಾಕು. 100 ಮೀಟರ್ ರಸ್ತೆಯನ್ನು ಇದು 10 ನಿಮಿಷದಲ್ಲೇ ಗುಡಿಸುತ್ತದೆ. ಜತೆಗೆ ಕಸ ಡಬ್ಬದಲ್ಲಿ ತುಂಬಿಬಿಡುತ್ತದೆ. ಒಬ್ಬ ಕಾರ್ಮಿಕರಿಗೆ ಇಷ್ಟು ಜಾಗ ಗುಡಿಸಲು ಕನಿಷ್ಠ ಅರ್ಧ ಗಂಟೆ ಬೇಕು ಕಸ ಎತ್ತಲು ಇನ್ನೊಬ್ಬ ಕಾರ್ಮಿಕ ಬೇಕು. ಹೀಗಾಗಿ ಇಬ್ಬರು ಕಾರ್ಮಿಕರು ಮಾಡುವ ಕೆಲಸವನ್ನು ಒಂದೇ ಯಂತ್ರ ತ್ವರಿತವಾಗಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.