ADVERTISEMENT

ಜೆನ್ನಿ ಮಿಲ್ಕ್‌: 4, 5ನೇ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 12:39 IST
Last Updated 16 ನವೆಂಬರ್ 2024, 12:39 IST
   

ಹೊಸಪೇಟೆ (ವಿಜಯನಗರ): ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರದಲ್ಲಿ ತೊಡಗಿದ್ದ ಜೆನ್ನಿ ಮಿಲ್ಕ್ ಕಂಪನಿ ₹13 ಕೋಟಿಗೂ ಅಧಿಕ ವಂಚಿಸಿದ ದೂರಿನ ಮೇರೆಗೆ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ನಾಲ್ಕು ಮತ್ತು ಐದನೇ ಆರೋಪಿಗಳ ಜಾಮೀನು ಅರ್ಜಿಯನ್ನು ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿದೆ.

ನಾಲ್ಕನೇ ಆರೋಪಿ ಹರ್ಷವರ್ಧನ ರಾಜು ಮತ್ತು ಐದನೇ ಆರೋಪಿ ಗುರ್ರಂ ಯೋಗಾನಂದ ರೆಡ್ಡಿ ಅವರು ಜೆಎಂಎಫ್‌ ನ್ಯಾಯಾಲಯ ಅಕ್ಟೋಬರ್ 26ರಂದು ತಮ್ಮ ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಸ್ವರೂಪ, 350ಕ್ಕೂ ಹೆಚ್ಚು ಜನರಿಗೆ ಮೋಸವಾಗಿರುವುದನ್ನು ಗಮನಿಸಿ ಹಾಗೂ ಪ್ರಕರಣವು ಇನ್ನೂ ತನಿಖಾ ಹಂತದಲ್ಲಿರುವುದರಿಂದ ಈ ಆರೋಪಿಗಳು ಜಾಮೀನು ಅರ್ಜಿಗೆ ಅರ್ಹರಲ್ಲ ಎಂದು ಪರಿಗಣಿಸಿದ ನ್ಯಾಯಾಧೀಶ ಅಬ್ದುಲ್‌ ರೆಹಮಾನ್‌ ನಂದಗಡಿ ಅವರು ಜಾಮೀನು ಅರ್ಜಿ ತಿರಸ್ಕರಿಸಿದರು.

ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಟಿ.ಅಂಬಣ್ಣ ವಾದಿಸಿದ್ದರು.‍

ADVERTISEMENT
ಸಿಐಡಿ ಕಸ್ಟಡಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಜೆನ್ನಿ ಮಿಲ್ಕ್‌ ಕಂಪನಿಯ ಎಂ.ಡಿ ನೂತಲಪಾಟಿ ಮುರಳಿ, ಕಂಪನಿಯ ವ್ಯವಸ್ಥಾಪಕ ಉಮಾಶಂಕರ್ ರೆಡ್ಡಿ ಮತ್ತು ಸೂಪರ್‌ವೈಸರ್‌ ಸೈಯದ್ ಮಹಮ್ಮದ್ ಗೌಸ್ ಸಹಿತ ಎಲ್ಲಾ ಐದು ಮಂದಿ ಇದೀಗ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರಗೊಂಡಿತ್ತು ಹಾಗೂ ಕಳೆದ ಎರಡು ದಿನಗಳಿಂದ ಸಿಐಡಿ ತನಿಖೆ ನಡೆಯುತ್ತಿದೆ. ಶುಕ್ರವಾರ ಎಲ್ಲಾ ಆರೋಪಿಗಳನ್ನು ಇಲ್ಲಿನ ಜೆಎಂಎಫ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.