ADVERTISEMENT

ಹೊಸಪೇಟೆ ನಗರಸಭೆ: ಅಸ್ಲಾಂ ಮಾಳ್ಗಿ ಗೆಲ್ಲಿಸಲು ಕಾಂಗ್ರೆಸ್ ಶತಪ್ರಯತ್ನ

ಹೊಸಪೇಟೆ ನಗರಸಭೆ ಅಧ್ಯಕ್ಷರ ಆಯ್ಕೆ– ಬಿಜೆಪಿಯಿಂದಲೂ ತಂತ್ರಗಾರಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:26 IST
Last Updated 11 ಸೆಪ್ಟೆಂಬರ್ 2024, 14:26 IST
ಅಸ್ಲಾಂ ಮಾಳ್ಗಿ
ಅಸ್ಲಾಂ ಮಾಳ್ಗಿ   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಮಧ್ಯಾಹ್ನ 1 ಗಂಟೆಯ ಬಳಿಕ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡೆಯ ಮೇಲೆ ಕುತೂಹಲ ನೆಲೆಸಿದೆ. 

ಹೊಸಪೇಟೆ ನಗರಸಭೆಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 12ನೇ ವಾರ್ಡ್‌ ಸದಸ್ಯ ಅಸ್ಲಾಂ ಮಾಳ್ಗಿ ಅವರು ಅಧ್ಯಕ್ಷ ಸ್ಥಾನದ ಹಾಗೂ 24ನೇ ವಾರ್ಡ್ ಸದಸ್ಯ ಎಚ್‌.ರಾಘವೇಂದ್ರ ಉಪಾಧ್ಯಕ್ಷ ಸ್ಥಾನದ ತನ್ನ ಅಭ್ಯರ್ಥಿ ಎಂದು ಕಾಂಗ್ರೆಸ್‌ ಪಕ್ಷ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. 

ಪಕ್ಷದ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಅವರು ಈ ಘೋಷಣೆ ಮಾಡಿದ್ದು, ಮತದಾನದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ತಮ್ಮ ಪಕ್ಷದ ಎಲ್ಲಾ 12 ಸದಸ್ಯರಿಗೆ ವಿಪ್‌ ಜಾರಿಗೊಳಿಸಿದ್ದಾರೆ. ಎಎಪಿ ಸದಸ್ಯ ಹಾಗೂ ಕೆಲವು ಪಕ್ಷೇತರ ಸದಸ್ಯರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ. ಸಂಸದ ಇ.ತುಕಾರಾಂ ಅವರೂ ಮತದಾನಕ್ಕೆ ಬರಲು ಒಪ್ಪಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಹುಮ್ಮಸ್ಸಿನಲ್ಲಿದೆ.

ADVERTISEMENT

ಆದರೆ ಶಾಸಕ ಎಚ್‌.ಆರ್‌.ಗವಿಯಪ್ಪ ಅವರ ನಡೆ ಕುತೂಹಲಕರವಾಗಿದೆ. ತಾವು ಮತದಾನಕ್ಕೆ ಬರುವುದಿಲ್ಲ ಎಂದು ಈಚೆಗೆ ಅವರು ಹೇಳಿಕೆ ನೀಡಿದ್ದರು. 

ಈ ಮಧ್ಯೆ, ಬಿಜೆಪಿ ಸಹ ಪಕ್ಷದ ಅಭ್ಯರ್ಥಿಗಳನ್ನು ಪಕ್ಷೇತರ ಸದಸ್ಯರ ನೆರವಿನಿಂದ ಗೆಲ್ಲಿಸಿಕೊಳ್ಳಲು ಶತಪ್ರಯತ್ನ ಮಾಡಿದೆ. ರೂಪೇಶ್‌ ಕುಮಾರ್‌, ಎಲ್‌.ಎಸ್.ಆನಂದ್‌ ಮತ್ತು ಉಮಾದೇವಿ ಅವರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

‘ಈಗಾಗಲೇ ಒಂದು ಸಭೆ ನಡೆಸಲಾಗಿದೆ. ಮಾಜಿ ಸಚಿವ ಆನಂದ್ ಸಿಂಗ್ ಅವರೂ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಇನ್ನೊಂದು ಸುತ್ತಿನ ಮಾತುಕತೆ ನಡೆದು ಗುರುವಾರ ಬೆಳಿಗ್ಗೆ ವಿಪ್‌ ಜಾರಿಗೊಳಿಸಲಾಗುವುದು. ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಮತ್ತೆ ಬಿಜೆಪಿಗೆ ನಗರಸಭೆಯ ಚುಕ್ಕಾಣಿ ದೊರೆಯುವ ವಿಶ್ವಾಸ ಇದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.