ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವುದರಿಂದ ಬುಧವಾರ ಬೆಳಿಗ್ಗೆ ನಗರದ ಪ್ರಮುಖ ಮಾರುಕಟ್ಟೆ, ಮುಖ್ಯ ರಸ್ತೆಗಳಲ್ಲಿ ಭಾರಿ ಜನಸಂದಣಿ ಕಂಡು ಬಂತು. ಇರುವೆಗಳಂತೆ ಜನ ಮುತ್ತಿಕೊಂಡಿದ್ದರು.
ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸಬೇಕೆಂದು ಜಿಲ್ಲಾಡಳಿತದಿಂದ ವ್ಯಾಪಕ ಪ್ರಚಾರ ನಡೆಸುತ್ತಿದ್ದರೂ ಜನ ಅದರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ. ನಿತ್ಯ ಜಿಲ್ಲೆಯಲ್ಲಿ ಸರಾಸರಿ 10ರಿಂದ 15 ಜನ ಸಾವನ್ನಪ್ಪುತ್ತಿದ್ದಾರೆ. ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಹೀಗಿದ್ದರೂ ಜನ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. ಜೀವಕ್ಕಿಂತ ವಸ್ತುಗಳನ್ನು ಖರೀದಿಸುವುದೇ ಮುಖ್ಯ ಎನ್ನುವ ರೀತಿಯಲ್ಲಿ ಸಾರ್ವಜನಿಕರು ವರ್ತಿಸುತ್ತಿದ್ದಾರೆ. ಅದಕ್ಕೆ ತಾಜಾ ನಿದರ್ಶನ ಬುಧವಾರ ನಗರದಲ್ಲೆಡೆ ಕಂಡು ಬಂದ ಜನದಟ್ಟಣೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ ಆರರಿಂದ ಹತ್ತು ಗಂಟೆಯ ವರೆಗೆ ಅಗತ್ಯ ವಸ್ತು ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಐದು ದಿನಗಳ ವರೆಗೆ ಯಾವುದೇ ರೀತಿಯ ಖರೀದಿಗೆ ಅವಕಾಶ ಇಲ್ಲ. ಇದನ್ನರಿತ ಜನ ನಗರದ ತರಕಾರಿ, ಹಣ್ಣಿನ ಮಾರುಕಟ್ಟೆ, ಮಾಂಸದಂಗಡಿ, ದಿನಸಿ ಮಳಿಗೆಗಳತ್ತ ದೌಡಾಯಿಸಿದರು. ಬೆಳಿಗ್ಗೆ ಏಳು ಗಂಟೆಯಿಂದಲೇ ನಗರದ ಗಾಂಧಿ ವೃತ್ತ, ಮೇನ್ ಬಜಾರ್, ಉದ್ಯೋಗ ಪೆಟ್ರೋಲ್ ಬಂಕ್, ರಾಮ ಟಾಕೀಸ್, ಟಿ.ಬಿ. ಡ್ಯಾಂ ರಸ್ತೆ, ಕಾಲೇಜು ರಸ್ತೆ, ಜಬ್ಬಲ್ ಸರ್ಕಲ್‌ನಲ್ಲಿ ಭಾರಿ ವಾಹನ ದಟ್ಟಣೆ ಇತ್ತು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ), ದೀಪಾಯನ ಶಾಲೆ ಮೈದಾನ, ಸೋಗಿ ಮಾರುಕಟ್ಟೆಯಲ್ಲಿ ಜನ ಅಂತರವಿಲ್ಲದೆ ನಿಂತುಕೊಂಡು ತರಕಾರಿ, ಹಣ್ಣು ಖರೀದಿಸಿದರು. ಪೊಲೀಸರು ಬಂದಾಗ ಚದುರಿ ಹೋಗುತ್ತಿದ್ದ ಜನ, ಅವರು ಅಲ್ಲಿಂದ ನಿರ್ಗಮಿಸುತ್ತಿದ್ದಂತೆ ಪುನಃ ಗುಂಪುಗೂಡಿ ಖರೀದಿಯಲ್ಲಿ ತೊಡಗುತ್ತಿದ್ದರು. ರಾಮ ಟಾಕೀಸ್ ಬಳಿಯ ಮಾಂಸದಂಗಡಿಗಳ ಎದುರು ಪರಿಸ್ಥಿತಿ ಭಿನ್ನವಾಗಿರಲಿಲ್ಲ. ನಗರದ ಎಲ್ಲ ದಿನಸಿ ಅಂಗಡಿಗಳ ಎದುರು ಉದ್ದನೆಯ ಸಾಲು ಕಂಡು ಬಂತು.
ಇತ್ತೀಚೆಗೆ ಪೊಲೀಸರು ಹಲವರ ಮೇಲೆ ದಂಡ ವಿಧಿಸಿ, ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರಿಂದ ಮಳಿಗೆಗಳವರು, ಜನರನ್ನು ಸಾಲಿನಲ್ಲಿ ನಿಂತು ಖರೀದಿಸಲು ಹೇಳುತ್ತಿದ್ದರು. ಗ್ರಾಹಕರಿಗೆ ಸ್ಯಾನಿಟೈಸರ್ ಹಾಕುತ್ತಿದ್ದರು.
ಖರೀದಿಗೆ ಹೆಚ್ಚಿನ ಜನ ಬರುವ ನಿರೀಕ್ಷೆ ಇದ್ದದ್ದರಿಂದ ಪೊಲೀಸರು, ನಗರಸಭೆ ಸಿಬ್ಬಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೇ ಗಸ್ತು ತಿರುಗಿದರು. ಗುಂಪುಗೂಡಿದವರನ್ನು ಚದುರಿಸಿದರು. ಅನುಮತಿ ಇಲ್ಲದಿದ್ದರೂ ತೆರೆದ ಮಳಿಗೆಗಳವರನ್ನು ಮುಚ್ಚಿಸಿದರು. ಡಿವೈಎಸ್ಪಿ ವಿ. ರಘುಕುಮಾರ, ಆಯಾ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ನಗರಸಭೆಯ ಪರಿಸರ ಎಂಜಿನಿಯರ್ ಆರತಿ, ಆರೋಗ್ಯ ಇನ್‌ಸ್ಪೆಕ್ಟರ್ ವೆಂಕಟೇಶ್ ಅವರು ನಗರದಾದ್ಯಂತ ಸಂಚರಿಸಿ, ಗುಂಪು ಗೂಡಿದವರಿಗೆ ಎಚ್ಚರಿಕೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳ ತೆರವು
ನಗರದ ಬಸ್ ನಿಲ್ದಾಣ, ಗಾಂಧಿ ವೃತ್ತ ಸೇರಿದಂತೆ ಇತರೆಡೆ ರಸ್ತೆ ಬದಿ ಹಣ್ಣು, ತರಕಾರಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದವರನ್ನು ನಗರಸಭೆ ಅಧಿಕಾರಿಗಳು ಬುಧವಾರ ಅಲ್ಲಿಂದ ತೆರವುಗೊಳಿಸಿದರು.
ತಳ್ಳುಗಾಡಿಗಳಲ್ಲಷ್ಟೇ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ವ್ಯಾಪಾರಿಗಳು ಅದನ್ನು ಉಲ್ಲಂಘಿಸಿ ಮಾರಾಟದಲ್ಲಿ ತೊಡಗಿದ್ದರು. ಅದನ್ನು ಗಮನಿಸಿದ ನಗರಸಭೆ ಪರಿಸರ ಎಂಜಿನಿಯರ್ ಆರತಿ, ಆರೋಗ್ಯ ಇನ್‌ಸ್ಪೆಕ್ಟರ್ ವೆಂಕಟೇಶ್ ಅವರು, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ ಅವರನ್ನು ಅಲ್ಲಿಂದ ಕಳುಹಿಸಿದರು.
ತರಕಾರಿ ಖಾಲಿ, ಖಾಲಿ
ನಗರದ ವಿವಿಧ ಬಡಾವಣೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬುಧವಾರ ಎಪಿಎಂಸಿಗೆ ಬಂದದ್ದರಿಂದ ಎರಡ್ಮೂರು ಗಂಟೆಗಳಲ್ಲಿ ತರಕಾರಿ, ಹಣ್ಣುಗಳೆಲ್ಲ ಖಾಲಿಯಾಯಿತು.
ಜನ ಹೆಚ್ಚು ಚೌಕಾಸಿ ಮಾಡದೆ ಸಿಕ್ಕಿದ್ದಷ್ಟು ಖರೀದಿಸಿ ತೆರಳಿದರು. ಬೈಕು, ಕಾರಿನಲ್ಲಿ ಬಂದಿದ್ದ ಜನ ಚೀಲಗಳಲ್ಲಿ ವಾರಕ್ಕಾಗುವಷ್ಟು ತರಕಾರಿ ಖರೀದಿಸಿ ಕೊಂಡೊಯ್ದರು. ಆದರೆ, ಈ ವೇಳೆ ಅಂತರ ಇಲ್ಲದೆ ವಹಿವಾಟು ನಡೆಸಿದರು. ಮನಬಂದಂತೆ ಓಡಾಡಿದರು.
ಮಧ್ಯಾಹ್ನ ಸಂಪೂರ್ಣ ಸ್ತಬ್ಧ
ಬುಧವಾರ ಹತ್ತು ಗಂಟೆಯ ನಂತರ ಇಡೀ ನಗರ ಸಂಪೂರ್ಣ ಸ್ತಬ್ಧಗೊಂಡಿತು. ನರಪಿಳ್ಳೆಯೂ ರಸ್ತೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಎಲ್ಲೆಡೆ ಖಾಕಿ ಪಡೆಯವರದೇ ಓಡಾಟ ಕಂಡು ಬಂತು.
ಖರೀದಿಗೆ ನಿಗದಿಪಡಿಸಿದ ಹತ್ತು ಗಂಟೆ ಸಮಯ ಆಗುತ್ತಿದ್ದಂತೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆ, ರಸ್ತೆಗಿಳಿದು ಎಲ್ಲವನ್ನೂ ಮುಚ್ಚಿಸಿದರು. ಜನರನ್ನು ಕಳುಹಿಸಿದರು. ತುರ್ತು ಸೇವೆ ಹೊರತುಪಡಿಸಿ ಬೇರೆ ಯಾರಿಗೂ ಹೊರಗೆ ಓಡಾಡಲು ಅವಕಾಶ ಕಲ್ಪಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.