ADVERTISEMENT

ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ಹೊಸಪೇಟೆಯಲ್ಲಿ ಸಂವಿಧಾನ ಜಾಗೃತಿ ನಡಿಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 9:58 IST
Last Updated 26 ನವೆಂಬರ್ 2022, 9:58 IST
ಹೊಸಪೇಟೆಯಲ್ಲಿ ನಡೆದ ಸಂವಿಧಾನ ಜಾಗೃತಿ ನಡಿಗೆ
ಹೊಸಪೇಟೆಯಲ್ಲಿ ನಡೆದ ಸಂವಿಧಾನ ಜಾಗೃತಿ ನಡಿಗೆ   

ಹೊಸಪೇಟೆ (ವಿಜಯನಗರ): ‘ಪ್ರಜಾವಾಣಿ’ ಅಮೃತ ಮಹೋತ್ಸವ ಹಾಗೂ ಭಾರತ ಸಂವಿಧಾನ ದಿನದ ಅಂಗವಾಗಿ ‘ಸಂವಿಧಾನ ಜಾಗೃತಿ ನಡಿಗೆ’ ಕಾರ್ಯಕ್ರಮ ಶನಿವಾರ ನಗರದಲ್ಲಿ ನಡೆಯಿತು.

ನಗರದ ಡಾ. ಪುನೀತ್‌ ರಾಜಕುಮಾರ್‌ ವೃತ್ತದಿಂದ ಬಸ್‌ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ದೊಡ್ಡ ಮಸೀದಿ, ಮದಕರಿ ನಾಯಕ ವೃತ್ತದ ಮೂಲಕ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದವರೆಗೆ ಜಾಗೃತಿ ನಡಿಗೆ ಜರುಗಿತು.

ಷಾ ಭವರ್‌ಲಾಲ್‌ ಬಾಬುಲಾಲ್‌ ನಾಹರ್‌ ಕಾಲೇಜು, ಆಟೊ ಯೂನಿಯನ್‌, ಮಾನವ ಬಂಧುತ್ವ ವೇದಿಕೆ, ವಿಜಯನಗರ ಜಿಲ್ಲಾ ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ, ಸಿದ್ದರಾಮೇಶ್ವರ ಕಲಾ ಸಂಘ, ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಂಬೆ ಪ್ರಕಾಶನ, ಶಿಳ್ಳೆಕ್ಯಾತರ ಸಂಘ, ಅಲೆಮಾರಿ ಬುಡಕಟ್ಟು ಸಂಘದವರು ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಂವಿಧಾನದ ಪೀಠಿಕೆ ಓದಲಾಯಿತು.

ಬಳಿಕ ಮಾತನಾಡಿದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಎಚ್‌. ಬಸವರಾಜ, ‘ನಮ್ಮ ದೇಶದಲ್ಲಿ ಸಂವಿಧಾನಕ್ಕಿಂತ ಮಿಗಿಲಾದ ಧರ್ಮಗ್ರಂಥ ಯಾವುದೂ ಇಲ್ಲ. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ತತ್ವಗಳನ್ನು ಇದು ಒಳಗೊಂಡಿದೆ. ಸಂವಿಧಾನ ರಚನಾ ಸಮಿತಿಯಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಹೊರಗಿಡುವ ಹುನ್ನಾರ ನಡೆದಿತ್ತು. ಆದರೆ, ಮಹಾತ್ಮ ಗಾಂಧೀಜಿ, ಪಂಡಿತ್‌ ಜವಾಹರಲಾಲ್‌ ನೆಹರೂ ಅವರು ಅಂಬೇಡ್ಕರ್‌ ಅವರು ಸಮಿತಿಯಲ್ಲಿ ಇರುವಂತೆ ನೋಡಿಕೊಂಡರು. ಅದರ ಪರಿಣಾಮ ಅಂಬೇಡ್ಕರ್‌ ಅವರು ಜಗತ್ತಿನಲ್ಲೇ ಉತ್ಕೃಷ್ಟ, ಅತ್ಯುತ್ತಮವಾದ ಸಂವಿಧಾನ ರಚಿಸಿ ಈ ದೇಶಕ್ಕೆ ಕೊಟ್ಟರು’ ಎಂದು ಹೇಳಿದರು.

‘ಸಂವಿಧಾನದ ಮುಖ್ಯ ಉದ್ದೇಶ ಈ ದೇಶದ ಬಹುತ್ವವನ್ನು ಕಾಪಾಡುವುದು. ಆದರೆ, ಇಂದು ದೇಶದಲ್ಲಿ ಏಕತ್ವದ ಚಿಂತನೆ ಜಾರಿಗೆ ತರಲು ಯೋಚಿಸಲಾಗುತ್ತಿದೆ. ಇದು ಸಂವಿಧಾನಕ್ಕೆ ವಿರುದ್ಧವಾದ ನಡೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀ ಸ್ವಾತಂತ್ರ್ಯ, ದಲಿತರಿಗೆ ಸಮಾನತೆಗಾಗಿ ಅಧಿಕಾರ ತ್ಯಾಗ ಮಾಡಿದರು. ದೊಡ್ಡ ವಕೀಲರಾಗಿದ್ದರೂ ಅಂಬೇಡ್ಕರ್‌ ಅವರು ಅದಕ್ಕೆ ಜೋತು ಬೀಳದೆ ದಲಿತರಿಗಾಗಿ ಮನೆ ಬಿಟ್ಟು ಬರುತ್ತಾರೆ. ಅವರ ತ್ಯಾಗದಿಂದ ಇಂಥ ಸಂವಿಧಾನ ರೂಪುಗೊಂಡಿದೆ. ಅದರ ಮಹತ್ವ ಅರಿತು ಅದನ್ನು ಉಳಿಸಿಕೊಳ್ಳಬೇಕಿದೆ’ ಎಂದರು.

‘ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮನವಾದ ಪಾಲು ಸಿಗಬೇಕೆಂದು ಅಂಬೇಡ್ಕರ್‌ ಅವರ ಕಾಲಮಾನದಲ್ಲೇ ಯೋಚಿಸಿದ್ದರು. ಅದಕ್ಕಾಗಿ ಕಾನೂನು ತರಲು ಮುಂದಾಗಿದ್ದಾಗ ಯಾರೂ ಬೆಂಬಲಿಸಲಿಲ್ಲ. ಹಾಗಾಗಿ ಅವರು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅವರ ತ್ಯಾಗವನ್ನು ಮಹಿಳೆಯರು ಎಂದಿಗೂ ಮರೆಯಬಾರದು’ ಎಂದು ತಿಳಿಸಿದರು.

ಪ್ರಾಧ್ಯಾಪಕ ಅಕ್ಕಿ ಮಲ್ಲಿಕಾರ್ಜುನ ಮಾತನಾಡಿ,ಅನೇಕ ಪಟ್ಟಭದ್ರ ಹಿತಾಸಕ್ತಿಗಳು ದೇಶದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅವುಗಳ ಬಗ್ಗೆ ಎಚ್ಚರದಿಂದ ಇದ್ದು, ನಮ್ಮ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸೋಮಶೇಖರ್‌ ಬಣ್ಣದಮನೆ ಮಾತನಾಡಿ, ಸಂವಿಧಾನವನ್ನು ಗೌರವಿಸಬೇಕು. ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರ ರಕ್ಷಣೆಗೂ ಕಂಕಣಬದ್ಧರಾಗಿರಬೇಕು ಎಂದು ತಿಳಿಸಿದರು.

ಲೇಖಕಿ ಅಂಜಲಿ ಬೆಳಗಲ್‌ ಮಾತನಾಡಿ, ಭಾರತದ ಸಂವಿಧಾನ ಒಂದು ಧರ್ಮ, ಜಾತಿಯ ಜನರಿಗಾಗಿ ಬರೆದಿಲ್ಲ. ಸರ್ವರ ಕಲ್ಯಾಣದ ಉದ್ದೇಶ ಇಟ್ಟುಕೊಂಡು ಸಂವಿಧಾನವನ್ನು ಅಂಬೇಡ್ಕರ್‌ ಅವರು ರಚಿಸಿದ್ದಾರೆ. ಪ್ರತಿಯೊಬ್ಬರೂ ಅದಕ್ಕೆ ಗೌರವ ಸಲ್ಲಿಸಿ ಅದರ ಆಶಯದಂತೆ ನಡೆದುಕೊಳ್ಳಬೇಕೆಂದು ಹೇಳಿದರು.

ಪ್ರಾಧ್ಯಾಪಕರಾದ ಗುಜ್ಜಲ್‌ ಹುಲುಗಪ್ಪ, ಮುಖಂಡರಾದ ಟಿ. ನಾಗರಾಜ್‌, ಸಿ.ಆರ್‌. ಭರತ್‌ ಕುಮಾರ್‌, ಸಣ್ಣ ಮಾರೆಪ್ಪ, ಅಕ್ಬರ್‌, ನಲ್ಲಪ್ಪ, ತಾರಿಹಳ್ಳಿ ಹನುಮಂತಪ್ಪ, ಎಸ್‌.ಎಂ. ಜಾಫರ್‌, ಎನ್‌.ಎಚ್‌. ಶ್ರೀನಿವಾಸ್‌, ಟಿಪ್ಪು ಸುಲ್ತಾನ್‌, ರುದ್ರಪ್ಪ, ಎಸ್‌.ಬಿ. ಅಮರೇಶಯ್ಯ, ಮಾರೇಶ್‌, ಲಿಂಗಣ್ಣ ನಾಯಕ, ರಾಮಕೃಷ್ಣ, ಜೆ.ಸಿ. ಈರಣ್ಣ, ಶಿವು ಬೆಳಗಲ್‌, ಸಜ್ಜಾದ್‌ ಖಾನ್‌, ಓಬಳೇಶ್‌, ಸಣ್ಣ ಈರಪ್ಪ, ವಿಜಯಕುಮಾರ್‌, ರಮೇಶ್‌, ಜಯಪ್ಪ, ರಾಮಚಂದ್ರ, ಗೋವಿಂದ, ಮರಿಸ್ವಾಮಿ, ನೀಲಕಂಠ, ಪ್ರಕಾಶ್‌, ಈರಪ್ಪ, ಮೆಹಬೂಬ್ ಬಾಷಾ ಇತರರು ಪಾಲ್ಗೊಂಡಿದ್ದರು.

‘ನಮ್ಮ ಸಂವಿಧಾನ, ನಮ್ಮ ಧರ್ಮಗ್ರಂಥ’

ಸಂವಿಧಾನ ಜಾಗೃತಿ ನಡಿಗೆಯುದ್ದಕ್ಕೂ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು ‘ನಮ್ಮ ಸಂವಿಧಾನ, ನಮ್ಮ ಧರ್ಮಗ್ರಂಥ’, ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು.
ಡಾ. ಪುನೀತ್‌ ರಾಜಕುಮಾರ್‌ ವೃತ್ತದಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ವರೆಗೆ ಎಲ್ಲರೂ ಉತ್ಸಾಹದಿಂದ ಹೆಜ್ಜೆ ಹಾಕಿದರು. ಅನಂತರ ಸಂವಿಧಾನ ಪೀಠಿಕೆ ಓದಿ, ಅದನ್ನು ಸಂರಕ್ಷಿಸುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಲೇಖಕಿ ಅಂಜಲಿ ಬೆಳಗಲ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಜಾಗೃತಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವ ‘ಪ್ರಜಾವಾಣಿ’ ಬಳಗದ ಕಾರ್ಯ ಶ್ಲಾಘನಾರ್ಹವಾದುದು.
– ಸೋಮಶೇಖರ್‌ ಬಣ್ಣದಮನೆ, ಜಿಲ್ಲಾ ಸಂಚಾಲಕ ಮಾನವ ಬಂಧುತ್ವ ವೇದಿಕೆ

ಮೀಸಲು ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕ, ಸಂಸದರು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಪ್ರಬಲವಾಗಿ ವಿರೋಧಿಸಬೇಕು.
– ಜೆ.ಕಾರ್ತಿಕ್‌, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.