ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿ ಕಳೆದ ವಾರದಿಂದ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಈರುಳ್ಳಿ ಕೊಳೆತಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ತಾಲ್ಲೂಕಿನ ಕಿತ್ನೂರು, ಮುತ್ಕೂರು, ತೆಲುಗೋಳಿ, ರಾಮೇಶ್ವರ ಬಂಡಿ, ತಂಬ್ರಹಳ್ಳಿ, ಮಾದೂರು, ನೆಲ್ಕುದ್ರಿ ಮೂರು ಗ್ರಾಮಗಳು, ಚಿಮ್ಮನಹಳ್ಳಿ, ಹಂಚಿನಾಳು, ಕನ್ನಿಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ 130 ರೈತರ 150 ಎಕರೆಗೂ ಹೆಚ್ಚು ಈರುಳ್ಳಿ ಕೊಳೆತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಾಲ್ಲೂಕಿನಲ್ಲಿ 1261 ಎಕರೆ ಈರುಳ್ಳಿ ಬೆಳೆಯಲಾಗಿದೆ. ಮಳೆಗೆ ಮುಂಚೆ ಶೇ 70ರಷ್ಟು ಕಟಾವು ಮಾಡಲಾಗಿದೆ. ಆದರೆ, ಕಟಾವು ಮಾಡಿದ ಈರುಳ್ಳಿ ನಷ್ಟಕ್ಕೀಡಾಗಿದೆ.
‘ಕಟಾವು ಮಾಡಬೇಕಿದ್ದ ಜಮೀನುಗಳಲ್ಲಿಯೂ ಮಳೆ ನೀರು ನಿಂತಿದ್ದು, ಕೊಳೆರೋಗದ ಭೀತಿ ಎದುರಾಗಿದೆ. ಕಟಾವು ಮಾಡಿ ರಾಶಿ ಹಾಕಿದ್ದ ಈರುಳ್ಳಿ ಮಳೆಗೆ ಸಂಪೂರ್ಣ ಕೊಳೆತುಹೋಗಿದೆ. ಈರುಳ್ಳಿ ರಾಶಿಗೆ ನೀರು ನುಗಿದ್ದರಿಂದ ಅದು ತಿಪ್ಪೆಯ ಪಾಲು’ ಎನ್ನುತ್ತಾರೆ ರೈತರು.
ಕಟಾವಿನ ಬಳಿಕ ಬಿಸಿಲಿಗೆ ಹಾಕಲಾಗಿತ್ತು. ಹವಮಾನ ವೈಪರೀತ್ಯದಿಂದಾಗಿ ಸುರಿದ ಜಿಟಿಜಿಟಿ ಮಳೆ ಎಲ್ಲ ಬೆಳೆಯನ್ನು ಕೊಳೆಯುವಂತೆ ಮಾಡಿದೆ. ರೈತರಿಗೆ ಏನೂ ತೋಚದಂತಾಗಿ ಕೈಚೆಲ್ಲಿ ಕುಳಿತ್ತಿದ್ದಾರೆ. ಈರುಳ್ಳಿ ಬೆಳೆದ ಗ್ರಾಮಗಳ ರೈತರ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ರೈತರು ಸರ್ಕಾರದ ನೆರವಿಗೆ ಕಾಯುತ್ತಿದ್ದಾರೆ.
‘ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸರ್ವೇ ಬಳಿಕ ನಿಖರವಾದ ನಷ್ಟದ ಮಾಹಿತಿ ದೊರೆಯಲಿದೆ‘ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ರಾಜೇಂದ್ರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.
ಈರುಳ್ಳಿ ಬೆಳೆದ ರೈತರು ಲಾಭದ ನಿರೀಕ್ಷೆಯಲ್ಲಿದ್ದರು. ಅಕಾಲಿಕ ಮಳೆಗೆ ಎಲ್ಲ ಕರಗಿ ಹೋಗಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಬೇಕುಮೈನಳ್ಳಿ ಕೊಟ್ರೇಶಪ್ಪ ರೈತ ಬನ್ನಿಗೋಳ
ಮಳೆಯಿಂದ ನಷ್ಟಗೊಂಡ ರೈತರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬೆಳೆ ವಿಮೆ ಮಾಡಿಸಿದ ರೈತರಿಗೆ ಎಕರೆಗೆ ₹30 ಸಾವಿರಕ್ಕೂ ಅಧಿಕ ಪರಿಹಾರ ಸಿಗಲಿದೆಎಚ್.ರಾಜೇಂದ್ರ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.