ಹೊಸಪೇಟೆ (ವಿಜಯನಗರ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳನ್ನು ಉತ್ತೇಜಿಸುತ್ತಿವೆಯೇ ಹೊರತು ಬಡವರು, ಕೂಲಿಕಾರರ ಉದ್ಧಾರಕ್ಕೆ ಯೋಜನೆಗಳನ್ನೇ ರೂಪಿಸುತ್ತಿಲ್ಲ. ಇಂದು ಕಿರು ಸಾಲ ನೀಡಿದವರು ಸಾಲ ಪಡೆದ ಬಡವರನ್ನು ಮನೆಯಿಂದ ಹೊರಬರಲು ಬಿಡದ ಸ್ಥಿತಿ ಇದೆ ಎಂದು ಸಿಪಿಎಂ ಕಳವಳ ವ್ಯಕ್ತಪಡಿಸಿದೆ.
ಪಕ್ಷದ 13ನೇ ಜಿಲ್ಲಾ ಸಮ್ಮೇಳನದ ಪ್ರಯುಕ್ತ ಮಂಗಳವಾರ ಇಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್, ಬಡ, ದಲಿತ, ಕೂಲಿಕಾರರಿಗೆ ನೆರವಾಗುವಂತಹ ಯೋಜನೆ ತರುವುದು ಕಾಂಗ್ರೆಸ್, ಬಿಜೆಪಿಯಿಂದ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ, ಸಿಪಿಎಂನಿಂದ ಮಾತ್ರ ಇದು ಸಾಧ್ಯವಿದ್ದು, ಜನ ಪಕ್ಷವನ್ನು ಬಲಪಡಿಸಿದರೆ ಅವರ ಜೀವನವೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
‘ಪರಿತ್ಯಕ್ತ ದೇವದಾಸಿಯರಿಗೆ, ಸ್ಮಶಾನ ಕಾರ್ಮಿಕರಿಗೆ 5 ಎಕರೆ ಕೃಷಿ ಜಮೀನು, ಮಾಸಿಕ ₹5 ಸಾವಿರ ಪಿಂಚಣಿ ನೀಡಬೇಕು. ಕನಿಷ್ಠ ವೇತನವನ್ನು ₹34 ಸಾವಿರಕ್ಕೆ ನಿಗದಿಪಡಿಸಬೇಕು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ವಿಚಾರದಲ್ಲಿ ಸಂಪೂರ್ಣ ಕಿವುಡಾಗಿವೆ, ಬದಲಿಗೆ ಬಂಡವಾಳಶಾಹಿಗಳಿಗಷ್ಟೇ ಮಣೆ ಹಾಕಿ, ಅವರಿಗೆ ಅಧಿಕ ಪ್ರಮಾಣದ ಸಬ್ಸಿಡಿಗಳನ್ನು ನೀಡುತ್ತಿವೆ. ಇದರ ಭಾಗವಾಗಿಯೇ ಜಿಂದಾಲ್‌ಗೆ 3,665 ಎಕರೆ ಜಮೀನನ್ನು ಎಕರೆಗೆ ₹1.20 ಲಕ್ಷದಂತೆ ನೀಡಲು ಸರ್ಕಾರ ಮುಂದಾಗಿದೆ. ಇದನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ’ ಎಂದು ಬಸವರಾಜ್ ಹೇಳಿದರು.
ಹಸಿವು ಹೆಚ್ಚಳ: ‘ಕಳೆದ 11 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲಿ ಹಸಿವೆಯಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆಯಾಗುವ ಬದಲಿಗೆ ಹೆಚ್ಚಾಗುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ದೇಶ 114 ದೇಶಗಳ ಬಳಿಕದ ಸ್ಥಾನದಲ್ಲಿದೆ. 80 ಕೋಟಿ ಜನ ಬಿಪಿಎಲ್ ಕಾರ್ಡ್ ಹೊಂದಿರುವುದು, ಇನ್ನೂ 20 ಕೋಟಿ ಜನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವುದೇ ನಮ್ಮ ದೇಶದ ಬಡತನಕ್ಕೆ ಹಿಡಿದ ಸಾಕ್ಷಿ. ಹೀಗಿದ್ದರೂ ದೇಶ ಶ್ರೀಮಂತವಾಗುತ್ತಿದೆ ಎಂಬ ಮಾತು ದೇಶದ ಶೇ 20ರಷ್ಟು ಅತಿ ಶ್ರೀಮಂತ ಮತ್ತು ಶ್ರೀಮಂತ ವರ್ಗದವರಿಗೆ ಮಾತ್ರ ಅನ್ವಯವಾಗುತ್ತದೆ’ ಎಂದು ಹೇಳಿದರು.
ಹೊಸ ಜಿಲ್ಲೆ–ಅಭಿವೃದ್ಧಿ ಇಲ್ಲ: ‘ವಿಜಯನಗರ ಜಿಲ್ಲೆ ರಚನೆಗೊಂಡು ಮೂರು ವರ್ಷ ಕಳೆದಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಸುವಂತಹ ಯಾವ ಪ್ರಯತ್ನವೂ ಇಲ್ಲಿ ನಡೆದಿಲ್ಲ. ರೈತರು, ಬಡ ಕೂಲಿ ಕಾರ್ಮಿಕರಿಗೆ ನೆರವಾಗುವಂತಹ ಸಕ್ಕರೆ ಕಾರ್ಖಾನೆ ಇರಬಹುದು, ವಸತಿ ಯೋಜನೆಗಳು ಇರಬಹುದು ಇಲ್ಲಿ ಗಗನ ಕುಸುಮವಾಗಿದೆ. ಜನರಿಂದ ಆಯ್ಕಯಾದ ಜನಪ್ರತಿನಿದಿಗಳ ನಿರ್ಲಕ್ಷ್ಯ ಧೋರಣಿಯೇ ಇದಕ್ಕೆಲ್ಲ ಕಾರಣ’ ಎಂದು ಅವರು ಆರೋಪಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಎಸ್.ವೈ.ಗುರುಶಾಂತ್ ಮಾತನಾಡಿದರು.
ಸಮ್ಮೇಳನದ ಆರಂಭದಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡಲಾಯಿತು. ಪಕ್ಷದ ಮುಖಂಡರಾದ ಆರ್.ಎಸ್.ಬಸವರಾಜ್, ಬಿ.ಮಾಳಮ್ಮ, ಮರಡಿ ಜಂಬಯ್ಯ ನಾಯಕ, ಕೆ.ನಾಗರತ್ನಮ್ಮ, ಎ.ಕರುಣಾನಿಧಿ, ಎಸ್.ಜಗನ್ನಾಥ, ವಿ.ಸ್ವಾಮಿ, ಎನ್.ಯಲ್ಲಾಲಿಂಗ ಇತರರು ಇದ್ದರು.
ಜೆ.ಪಿ.ನಗರದ ಕಮ್ಮವಾರಿ ಭವನದಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿದ್ದು, ಬುಧವಾರ ಸಂಜೆ ಕೊನೆಗೊಳ್ಳಲಿದೆ.
ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು
‘ಆರ್‌ಎಸ್‌ಎಸ್, ವಿಎಚ್‌ಪಿ, ಬಜರಂಗದಳದವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಯಾವ ಮಸೀದಿಯಲ್ಲಿ ಯಾವ ದೇವಸ್ಥಾನ ಇದೆ ಎಂದು ಹುಡುಕುವುದಷ್ಟೇ ಅವರ ಕೆಲಸವಾಗಿದೆ. ಇಂತಹ ಸಂಘಟನೆಗಳನ್ನು ನಿಷೇಧಿಸುವ ಅಗತ್ಯ ಇದೆ’ ಎಂದು ಬಸವರಾಜ್ ಪ್ರತಿಪಾದಿಸಿದರು.
ಹೆಚ್ಚು ದುಡಿಯಲು ಹೇಳುತ್ತಿರುವ ಬಂಡವಾಳಶಾಹಿಗಳು ಕೂಲಿ ಹೆಚ್ಚಳ ಮಾಡುತ್ತಾರೆಯೇ? ಇದು ಶೋಷಣೆಯ ಪರಮಾವಧಿ, ಇದನ್ನು ಒಪ್ಪಲು ಸಾಧ್ಯವಿಲ್ಲಯು.ಬಸವರಾಜ್, ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.