ADVERTISEMENT

ಬೆಳೆ ಪರಿಹಾರ ನೀಡದ ಸರ್ಕಾರದ ವಿರುದ್ಧ ರೈತ ಸಂಘ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:57 IST
Last Updated 22 ಅಕ್ಟೋಬರ್ 2024, 14:57 IST

ಹೊಸಪೇಟೆ (ವಿಜಯನಗರ): ಮಳೆಯಿಂದಾಗಿ ರೈತರಿಗೆ ಕಳೆದ ಮುಂಗಾರು ಹಾಗೂ ಸದ್ಯದ ಹಿಂಗಾರು ಬೆಳೆ ನೂರಾರು ಎಕರೆ ಪ್ರದೇಶದಲ್ಲಿ ಫಸಲು ನಾಶವಾಗಿದ್ದು, ಈವರೆಗೂ ಯಾವುದೇ ರೀತಿಯ ಪರಿಹಾರ ನೀಡದ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ ಬಣ)ದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್.ಕಾಳಿದಾಸ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಮೇ.16ರಂದು ಹೊಸಪೇಟೆ ತಾಲ್ಲೂಕು ಒಂದರಲ್ಲಿಯೇ 208 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬಾಳೆ ಬೆಳೆ ನಾಶವಾಗಿದ್ದು, ಆ ಬೆಳೆ ಕಳೆದುಕೊಂಡ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ’ ಎಂದರು.

ಮುಂಗಾರು, ಹಿಂಗಾರು ಮಳೆಗೆ ಜಿಲ್ಲೆಯ ಹೊಸಪೇಟೆಯಲ್ಲಿ 67 ಹೆಕ್ಟೇರ್, ಹಗರಿಬೊಮ್ಮನಹಳ್ಳಿಯಲ್ಲಿ 7, ಹಡಗಲಿಯಲ್ಲಿ 20, ಕೂಡ್ಲಿಗಿಯಲ್ಲಿ 27 ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 400 ಹೆಕ್ಟೇರ್ ಹಾನಿಯಾಗಿದ್ದು, ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ADVERTISEMENT

‘ಈ ಬಾರಿ ಮುಂಗಾರು ಮಳೆಗೆ ಬೆಳೆದ ಮೆಕ್ಕೆಜೋಳ, ಭತ್ತ ಮತ್ತು ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ಇನ್ನು ಸಮಸ್ಯೆಯನ್ನು ಅಧಿಕಾರಿಗಳ ಮುಂದೆ ಹೇಳಬೇಕೆಂದರೆ ಅಧಿಕಾರಿಗಳು ಸಿಗದೇ ಸತಾಯಿಸುತ್ತಿದ್ದಾರೆ. ಮುಂದಿನ 15 ದಿಗಳಲ್ಲಿ ಸೂಕ್ತ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುದು’ ಎಂದರು.

ಎಚ್.ಮಲ್ಲಿಕಾರ್ಜುನ, ಹೇಮರಡ್ಡಿ, ಕೆ.ಎಚ್.ಮಹಾಂತೇಶ್, ಎಲ್.ಎಸ್. ರುದ್ರಪ್ಪ, ಜ್ಯೋತಿ ಕೊಟ್ರಪ್ಪ, ನಲ್ಲಾಪುರ ಹನುಮಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.