ADVERTISEMENT

ವಿಜಯನಗರ | ಬೆಳೆ ನಷ್ಟ; ವಿಮೆ ಮಾಡದ್ದಕ್ಕೆ ಪಶ್ಚಾತ್ತಾಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 4:22 IST
Last Updated 28 ಆಗಸ್ಟ್ 2023, 4:22 IST
ಬರಗಾಲ (ಪ್ರಾತಿನಿಧಿಕ ಚಿತ್ರ)
ಬರಗಾಲ (ಪ್ರಾತಿನಿಧಿಕ ಚಿತ್ರ)   

ಎಂ.ಜಿ.ಬಾಲಕೃಷ್ಣ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಬೆಳೆ ವಿಮೆಯನ್ನು ದೊಡ್ಡ ಸಂಖ್ಯೆಯಲ್ಲಿ ಮಾಡದೆ ಇರುವುದಕ್ಕೆ ಕೃಷಿಕರು ಪಶ್ಚಾತ್ತಾಪ ಪಡುತ್ತಿದ್ದಾರೆ. ವಿಮೆ ಬೇಡ, ವಿಮಾ ಕಂಪನಿಗಳಿಗಷ್ಟೇ ಅದರಿಂದ ಲಾಭ ಎಂಬುದು ನಿಜವಾಗಿದ್ದರೂ, ಈ ಬಾರಿ ಪರಿಸ್ಥಿತಿ ಬದಲಾಗಿದ್ದರಿಂದ ಜನರ ಚಿಂತನೆಯೂ ಬದಲಾಗಿದೆ.

‘ಈ ವರ್ಷ ಬೆಳೆ ವಿಮೆ ಪಾವತಿ ಅವಧಿ ಮುಗಿಯಿತು, ಮುಂದಿನ ವರ್ಷವಾದರೂ ಕಷ್ಟಕ್ಕೆ ಸಿಲುಕುವ ರೈತರಿಗೆ ವಿಮಾ ರಕ್ಷೆ ಸಮರ್ಪಕವಾಗಿ ಸಿಗಲಿ ಎಂಬುದೇ ನಮ್ಮ ಕಳಕಳಿ. ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡಲು ವಿಮೆ ಮಾಡಿಸಬೇಕೇ ಎಂಬ ಮನೋಭಾವ ಬೇಡ’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್‌ ಹೇಳುತ್ತಾರೆ.

ADVERTISEMENT

ಜಿಲ್ಲೆಯಲ್ಲಿ ಈ ಬಾರಿ ವಿಮೆ ಮಾಡಿಸಿಕೊಂಡವರ ರೈತರ ಸಂಖ್ಯೆ 36,340. ಹರಪನಹಳ್ಳಿ ತಾಲ್ಲೂಕಿನಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಕೃಷಿಕರು ವಿಮೆ ಮಾಡಿಸಿಕೊಂಡಿದ್ದಾರೆ. ಈ ತಾಲ್ಲೂಕಿನಲ್ಲಿ  21,534 ಮಂದಿ ವಿಮೆ ಮಾಡಿಸಿಕೊಂಡಿದ್ದಾರೆ. ಹೂವಿನ ಹಡಗಲಿಯಲ್ಲಿ 5,666 ಮಂದಿ, ಕೊಟ್ಟೂರಿನಲ್ಲಿ 4,601 ಮಂದಿ, ಕೂಡ್ಲಿಗಿಯಲ್ಲಿ 2,877 ಮಂದಿ, ಹಗರಿಬೊಮ್ಮನಹಳ್ಳಿಯಲ್ಲಿ 1,334 ಮಂದಿ ಹಾಗೂ ಹೊಸಪೇಟೆ ತಾಲ್ಲೂಕಿನಲ್ಲಿ ಕೇವಲ 328 ಮಂದಿ ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ.

ಬರ ಪೀಡಿತ ಪ್ರದೇಶ ಘೋಷಣೆಗೆ ಶೇ 60ರ ಬದಲಿಗೆ ಈ ಮೊದಲು ಇದ್ದಂತೆ ಶೇ 20 ಮಳೆ ಕೊರತೆ ಮಾನದಂಡ ಇರಲಿ ಕೇಂದ್ರ ಸರ್ಕಾರ ತಕ್ಷಣ ಅದನ್ನು ಮಾಡಲಿ.
ಜೆ.ಕಾರ್ತಿಕ್‌, ರೈತ ಮುಖಂಡ

ಏನು ಕಾರಣ?

‘ವಿಮಾ ಕಂತನ್ನು ಬಿಡಿಸಿಸಿ ಬ್ಯಾಂಕ್‌ ಮೂಲಕವೇ  ಕಟ್ಟಿಸಿಕೊಳ್ಳುತ್ತಾರೆ,  ಆದರೆ ವಿಮೆ ಪಡೆಯಲು ಮಾತ್ರ ರೈತರು ಪಡುವ ಪಾಡು ಹೇಳತೀರದು. ತಾಲ್ಲೂಕಿಗೊಂದು ವಿಮಾ ಕಚೇರಿ ತೆರೆಯಲಿ, ರೈತರಿಗೆ ಅಲ್ಲೇ ಸೂಕ್ತ ಸಲಹೆ, ಪರಿಹಾರ ಸಿಗುವಂತೆ ಮಾಡಲಿ, ರೈತರು ಖಂಡಿತ ವಿಮೆ ಮಾಡಿಸಿಯೇ ತೀರುತ್ತಾರೆ’ ಎಂದು ಹೇಳುತ್ತಾರೆ ರೈತ ಮುಖಂಡ ಜೆ.ಕಾರ್ತಿಕ್‌.

ವಿಮೆ ಮಾಡಿಸಿಕೊಂಡು ಕೃಷಿಕರು ಅದರ ಲಾಭ ಪಡೆಯಲಿ ಬಳಿಕ ಅವರೇ ಇತರರಿಗೂ ಪ್ರೇರಣೆಯಾಗುತ್ತಾರೆ. ನಮ್ಮ ಕ್ಷೇತ್ರ ಕಾರ್ಯಕರ್ತರು ಇನ್ನಷ್ಟು ಉತ್ಸಾಹ ತೋರಬೇಕಿದೆ.
ಶರಣಪ್ಪ ಮುದ್ಗಲ್‌, ಜಂಟಿ ಕೃಷಿ ನಿರ್ದೇಶಕ

‘2016–17ರಲ್ಲಿ ಫಸಲ್ ವಿಮಾ ಯೋಜನೆ ಜಾರಿಗೆ ಬಂತು. ಆಗ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ₹21 ಕೋಟಿ ವಿಮಾ ಪ್ರೀಮಿಯಂ ಸಂಗ್ರಹವಾಗಿತ್ತು. ರೈತರಿಗೆ ಪಾವತಿಯಾಗಿದ್ದ ವಿಮೆ ಮೊತ್ತ ಕೇವಲ ₹1 ಕೋಟಿ. ಇಂತಹ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಕೃಷಿ ಇಲಾಖೆ ವಿಮೆ ಮಾಡಿಸಲು ಉತ್ತೇಜನ ಮಾಡುತ್ತದೆ ನಿಜ, ಆದರೆ ವಿಮಾ ಪರಿಹಾರ ದೊರಕಿಸಿಕೊಡುವಲ್ಲಿ ಅವರಿಗೂ ಕೆಲವೊಂದು ತೊಡಕುಗಳು ಕಾಡುತ್ತವೆ. ಹೀಗಾಗಿ ರೈತರಿಗೆ ಅವರಿಂದಲೂ ಸಮರ್ಪಕವಾದ ನ್ಯಾಯ ಸಿಗುತ್ತಿಲ್ಲ. ಹೀಗಾಗಿಯೇ ಬೆಳೆ ವಿಮೆ ಮಾಡಿಸಲು ಕೃಷಿಕರು ಉತ್ಸಾಹ ತೋರುತ್ತಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಕಳೆದ ಮೂರು ವರ್ಷಗಳಿಂದ ವಿಜಯನಗರ ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ, ಪರಿಹಾರ ಪಡೆಯುವವರ ಸಂಖ್ಯೆ ಮತ್ತು ಪರಿಹಾರ ಮೊತ್ತವೂ ಅಧಿಕವಾಗಿದೆ. ಹರಪನಹಳ್ಳಿಯ ಒಂದೇ ಪಂಚಾಯಿತಿಗೆ ಈ ವರ್ಷ ₹ 2 ಕೋಟಿಗೂ ಅಧಿಕ ಪರಿಹಾರ ಬಂದಿದ್ದು, ಒಬ್ಬೊಬ್ಬ ರೈತರಿಗೆ ಸರಾಸರಿ ₹ 15 ಸಾವಿರದಿಂದ ₹ 20 ಸಾವಿರದಷ್ಟು ‍ವಿಮಾ ಪರಿಹಾರ ದೊರೆತಿದೆ. ಈ ಬಾರಿ ಮಳೆ ಇಲ್ಲದೆ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ. ಜುಲೈ 31ರಂದೇ ವಿಮಾ ಕಂತು ಪಾವತಿಯ ಅವಧಿ ಕೊನೆಗೊಂಡಿದೆ. ಈ ವರ್ಷದ ಪಾಠ ಕಲಿತು ಮುಂದಿನ ವರ್ಷವಾದರೂ ರೈತರು ವಿಮೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಿಕೊಂಡರೆ ನಷ್ಟದ ಪೂರ್ತಿ ಪಾಲು ಅಲ್ಲವಾದರೂ ಒಂದಿಷ್ಟು ಪಾಲನ್ನು ಪರಿಹಾರ ರೂಪದಲ್ಲಿ ಪಡೆಯುವುದು ಸಾಧ್ಯವಾಗಬಹುದು’ ಎಂದು ಸಲಹೆ ನೀಡುತ್ತಾರೆ ಶರಣಪ್ಪ ಮುದ್ಗಲ್‌.

2022–23ರಲ್ಲಿ ಬೆಳೆ ವಿಮೆ ಪಡೆದವರ ವಿವರ

ತಾಲ್ಲೂಕು;ಅರ್ಜಿ;ಪಡೆದ ವಿಮಾ ಮೊತ್ತ (₹ ಲಕ್ಷಗಳಲ್ಲಿ)

ಹೂವಿನಹಡಲಿ ; 601 ; 136.30

ಹಗರಿಬೊಮ್ಮನಹಳ್ಳಿ; 138 ; 25.13

ಹರಪನಹಳ್ಳಿ ; 9026 ; 1143.44

ಹೊಸಪೇಟೆ ; 156 ; 16.33

ಕೊಟ್ಟೂರು ; 308 ; 46.84

ಕೂಡ್ಲಿಗಿ ; 1106 ; 63.35

ಒಟ್ಟು ; 11335 ; 1431.38

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.