ಹೊಸಪೇಟೆ (ವಿಜಯನಗರ): ನನಗೆ ಮೂರೂ ರಾಜ್ಯಗಳ ಜನರ ಬಗ್ಗೆ ಕಾಳಜಿ ಇರುವುದಕ್ಕೆ ಸೇವಾ ಭಾವದಿಂದ ಗೇಟ್ ಅಳವಡಿಕೆ ಮಾಡಿದ್ದೇನೆ, ಈಗಾಗಲೇ 30 ಟಿಎಂಸಿ ನೀರು ಉಳಿಸಿದ್ದೇನೆ, 90 ಟಿಎಂಸಿ ಅಡಿ ನೀರು ನಿಶ್ಚಿತವಾಗಿ ಸಿಗುತ್ತದೆ ಎಂದು ಕ್ರಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ಇಲ್ಲಿ ಶನಿವಾರ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಆತಂಕಪಡಬಾರದು, ಇನ್ನೆರಡು ಗೇಟ್ ಎಲಿಮೆಂಟ್ ಗಳು ಮಧ್ಯಾಹ್ನದ ವೇಳೆಗೆ ಅಳವಡಿಕೆಯಾಗಲಿವೆ, ಆಗ 90 ಟಿಎಂಸಿ ಅಡಿ ನೀರು ಸಂಗ್ರಹಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ಬಾಕಿ ಉಳಿದ ಗೇಟ್ ಗಳ ಅಳವಡಿಕೆ ಸೋಮವಾರ ಪೂರ್ಣಗೊಳ್ಳಲಿದೆ, ಇದು ಸ್ಟಾಪ್ ಲಾಗ್ ಗೇಟ್ ಅಲ್ಲ, ಇದು ಸ್ಟಾಪ್ ಲಾಗ್ ಅಷ್ಟೇ. ಅಂದರೆ ತಾತ್ಕಾಲಿಕ ತಡೆಗೋಡೆ ರೀತಿಯ ಗೇಟ್ ಅಷ್ಟೇ ಎಂದರು.
ಮುಂದೆ ಕ್ರಸ್ಟ್ ಗೇಟ್ ಸಿದ್ಧವಾಗುವ ತನಕ ಇದು ಸಮರ್ಥವಾಗಿ ನೀರು ತಡೆಹಿಡಿಯುತ್ತದೆ, ಆದರೆ ಅಣೆಕಟ್ಟೆಯ ನೀರಿನ ನಿರ್ವಹಣೆಗಾಗಿ ಕ್ರೆಸ್ಟ್ ಗೇಟ್ ಸಜ್ಜುಗೊಳಿಸುವಂತೆ ಶಿಫಾರಸು ಮಾಡಿ ವರದಿ ನೀಡುತ್ತೇನೆ ಎಂದರು.
ಎರಡು ವರ್ಷಗಳ ಹಿಂದೆ ನಾನು ಜಲಾಶಯಕ್ಕೆ ಬಂದಿದ್ದೆ. ಈ ಮೊದಲೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡೋದಕ್ಕೆ ಹೇಳಿದ್ದೆ. ಆದರೆ ಅವಾಗ ಎಲ್ಲಾ ಸರಿ ಇದೆ ಅಂತಾ ಹೇಳಿದ್ದರು ಎಂದರು.
ಈ ಘಟನೆ ನಡೆದಾಗ ನಾನು ಮಲಗಿದ್ದೆ, ಕಾಲ್ ಬಂತು ಕೂಡಲೇ ನಮ್ಮವರನ್ನ ಕರೆಸಿ ಮಾತನಾಡಿದೆ. ಸ್ಟಾಪ್ ಲಾಗ್ ಗೇಟ್ ಕೂಡಿಸೋ ಬಗ್ಗೆ ಚರ್ಚೆ ಮಾಡಿದೆ. ಮೂರು ರಾಜ್ಯಗಳ ನೀರಾವರಿ ಬಗ್ಗೆ ಚರ್ಚೆ ಮಾಡಿದೆವು. ಸ್ಟಾಪ್ ಲಾಗ್ ಗೇಟ್ ಕೂಡಿಸುವ ಬಗ್ಗೆ ಡಿಸೈನ್ ರೆಡಿ ಮಾಡಿದೆ. ಅದನ್ನ ಸಿಡಬ್ಲುಸಿ ಹಾಗೂ ಜಲಾನಯನ ಪ್ರದೇಶದಲ್ಲಿ ಅಪ್ರೂವಲ್ ತಗೊಂಡೆ ಎಂದು ವಿವರಿಸಿದರು.
ಒಂದು 100 ವರ್ಷ ಬಾಳಿಕೆ ಬರುತ್ತೆ. ಕ್ರಸ್ಟ್ ಗೇಟ್‌ಗಳು 45 ವರ್ಷ ಗೇಟ್ ಬಾಳಿಕೆ ಬರುತ್ತೆ. ಆದ್ರೆ ಇದು 70 ವರ್ಷ ಆಗಿದೆ. ಸಿಎಂ ಬಂದಾಗ ಒಂದು ಮನವಿ ಮಾಡಿದ್ರು. ಎಲ್ಲೋದ್ರೂ ನಿನ್ ಹೇಳ್ತಾರೆ ಅಂತಾ ಹೇಳಿ, ಏನಾದ್ರೂ ಮಾಡಿ ಬೆಳೆ ಬರುವಂತೆ ಮಾಡಿ ಎಂದು ಕೇಳಿಕೊಂಡ್ರು. ನಾನು ಆಗ ಅವ್ರಿಗೆ ಅಭಯ ನೀಡಿದೆ. ಆಗ ಎಲ್ಲಾ ಸಹಾಯ ಮಾಡ್ತೇನೆ ಅಂತಾ ಸಿಎಂ ಹೇಳಿದ್ರು. ಸ್ಟಾಪ್ ಲಾಗ್ ಗೇಟ್ ಅಳವಡಿಸೋಕೆ ಬೃಹತ್ ಕ್ರೇನ್‌ಗಳು ಬೇಕಿತ್ತು. ಆ ಸಲಕರಣೆ ಇರೋದು ಜಿಂದಾಲ್‌ನಲ್ಲಿ ಮಾತ್ರ. ಆದ್ರೂ ನಮಗೆ ಎರಡು ದಿನ ವ್ಯರ್ಥ ಆಯ್ತು ಆಗ ತುಂಬಾ ಅಪ್ಸೆಟ್ ಆಯ್ತು. ಮೇಲೆ ಸ್ಕೈ ವಾಕ್ ಹಾಗೂ ಭೀಮ್ ತೆಗೆಯೋಕೆ ಕೇಂದ್ರದ ಫರ್ಮೀಷನ್ ಇಲ್ಲ ಅಂದ್ರು. ತುಂಬಾ ಅಪ್ಸೆಟ್ ಆಗಿದ್ವಿ. ಸಿಎಂ ಅವ್ರಿಗೆ ಹೇಳಿ ರಿಸ್ಕ್‌ನಲ್ಲಿ ಸ್ಕೈ ವಾಕ್ ತೆಗೆತೀವಿ ಅಂತಾ ಹೇಳಿ ಫರ್ಮೀಷನ್ ತಗೊಳ್ಳೋದಕ್ಕೆ ಹೇಳಿದ್ವಿ. ಆಗ ಸಿಎಂ ನೀವು ಮಾಡಿ ಅಂತಾ ಹೇಳಿ ಫರ್ಮೀಷನ್ ತಗೊಂಡ್ರು. ಆಮೇಲೆ ಕೆಲಸ ಆರಂಭ ಮಾಡಿದ್ವಿ ಎಂದು ಅವರು ವಿವರಿಸಿದರು.
ಯಶಸ್ವಿ ಆಗಿದ್ದೇವೆ: ಗೇಟ್ ಅಳವಡಿಸುವ ಕಾರ್ಯಾಚರಣೆಯಲ್ಲಿ ನಾವು ಯಶಸ್ವಿ ಆಗಿದ್ದೇವೆ. ಸೋಮವಾರದೊಳಗೆ ಎಲ್ಲಾ ಕೆಲಸ ಮುಗಿಸ್ತೇವೆ. ರೈತರಿಗೆ ಎರಡು ಬೆಳೆಗೆ ನೀರು ಹಾಗೂ ಕುಡಿಯೋದಕ್ಕೂ ನೀರು ಲಭ್ಯವಾಗ್ತದೆ. 105 ಟಿಎಂಸಿ ಅಡಿ ನೀರು ಸಂಗ್ರಹ ಆಗುತ್ತೆ ಯಾವುದೇ ಆತಂಕ ಬೇಡ ಎಂದ ಕನ್ನಯ್ಯ ನಾಯ್ಡು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.