ಕಾನಹೊಸಹಳ್ಳಿ (ವಿಜಯನಗರ): 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ್ಲಿಗಿ ತಾಲ್ಲೂಕಿನ ಬಿಷ್ಣಹಳ್ಳಿ ಗ್ರಾಮದ ಬಯಲಾಟ (ಮೂಡಲಪಾಯ) ಕಲಾವಿದ ಹಂಡಿ ಜೋಗಿ ಸಮುದಾಯದ ದಳವಾಯಿ ಸಿದ್ದಪ್ಪ ಅವರು ಆಯ್ಕೆಯಾಗಿದ್ದಾರೆ.
ಬಿಷ್ಣಹಳ್ಳಿ ಗ್ರಾಮದ ಬಯಲಾಟ ಮೇಷ್ಟ್ರು ದಳವಾಯಿ ರಾಮಪ್ಪ ಹಾಗೂ ದಳವಾಯಿ ಗಂಗಮ್ಮ ಅವರ ದಂಪತಿಗೆ 4-6-1951 ರಂದು ಜನಿಸಿದ ದಳವಾಯಿ ಸಿದ್ದಪ್ಪ ಅವರು ಮೂವರು ಪುತ್ರರ ಪೈಕಿ ಹಿರಿಯರು. ನಾಲ್ವರು ಸಹೋದರಿಯರಿದ್ದಾರೆ.
ಕಳೆದ 45 ವರ್ಷಗಳಿಂದ ಬಯಲಾಟ, ಸಣ್ಣಾಟ, ಯಕ್ಷಗಾನ, ಪುರಾಣ, ಭಜನೆ, ಕೋಲಾಟ ಸೇರಿದಂತೆ ಹಲವು ಕಲಾ ಪ್ರಕಾರಗಳಲ್ಲಿ ನಾಟಕದ ಮೇಷ್ಟ್ರು(ಭಾಗವತರು) ಆಗಿ ಹಾಗೂ ಬಾಲ್ಯದಲ್ಲಿ ಸ್ತ್ರೀ, ಪುರುಷ ವೇಷಧಾರಿಯಾಗಿ ನಟನೆ ಮಾಡಿದ್ದಾರೆ, ಜತಗೆ ಮೃದಂಗ ವಾದಕರಾಗಿ ಹಲವು ನಾಟಕಗಳಲ್ಲಿ ಪ್ರಯೋಗ ಮಾಡಿದ್ದಾರೆ.
ತಮ್ಮ ಹದಿನೈದನೇ ವಯಸ್ಸಿಗೆ ಅವರು ದುಶ್ಯಾಸನ ನಾಟಕದಲ್ಲಿ ಗಾಂಧಾರಿ ಪಾತ್ರದ ಮೂಲಕ ಸ್ತ್ರೀ ಪಾತ್ರದಾರಿಯಾಗಿ ಬಣ್ಣ ಹಚ್ಚಿಕೊಂಡರು, 18ನೇ ವಯಸ್ಸಿಗೆ ಶಂಬರ ಸುರನ ವಧೆ, 21 ವಯಸ್ಸಿಗೆ ಮೋಹಿನಿ ಭಸ್ಮಾಸುರ ಬಯಲಾಟ ಪ್ರದರ್ಶನಗಳ ಮೂಲಕ ಅವರ ರಂಗ ಪಯಣ ಮುಂದುವರಿಯಿತು.
ದುಶ್ಯಾಸನ ನಾಟಕ, ವೀರ ಅಭಿಮನ್ಯು ಕಾಳಗ, ಕರ್ಣ ಅರ್ಜುನ ಕಾಳಗ, ವಿರಾಟ ಪರ್ವ, ಶ್ರೀದೇವಿ ಮಹಾತ್ಮೆ, ನುಂಕೆಮಲೇ ಸಿದ್ದೇಶ್ವರ ಮಹಾತ್ಮೆ ಸೇರಿದಂತೆ 106 ನಾಟಕಗಳಿಗೆ ನಿರ್ದೇಶನ ನೀಡಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಅವರು ಹಲವು ಪ್ರಯೋಗಗಳನ್ನು ನೀಡಿದ್ದಾರೆ.
ಸಿದ್ದಪ್ಪ ದಳವಾಯಿ ಪತ್ನಿ ಸಾಕಮ್ಮ ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು, ಹಿರಿಯ ಪುತ್ರ ರಘುನಾಥ ಅವರು ಶಿಕ್ಷಕ ವೃತ್ತಿಯಲ್ಲಿದ್ದು, ಹಲವು ಪೌರಾಣಿಕ ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಬಯಲಾಟಗಳಂತಹ ಕಲೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ, ಕುಟುಂಬದವರ ಹಾಗೂ ಜನತೆಯ ಪ್ರೋತ್ಸಾಹಕ್ಕೆ ಹೆಚ್ಚಿದೆ, ಇಂತಹ ಕಲೆ ಉಳಿಯಬೇಕಿದೆ ಎಂದು ದಳವಾಯಿ ಸಿದ್ದಪ್ಪ ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.