ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯ ಭರ್ತಿಯಾಗಿರುವುದರಿಂದ ತಾಲ್ಲೂಕಿನ ಹಳೇ ಚಿಮ್ಮನಹಳ್ಳಿ ಮತ್ತು ಮಸಾರಿ ನೆಲ್ಕುದ್ರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಈಗ ರೈತರಿಗೆ ಮತ್ತು ದುರ್ಗಾಂಬಿಕಾ ದೇವಸ್ಥಾನದ ಭಕ್ತರಿಗೆ ಕೊಪ್ಪರಿಕೆ ಹಾಗೂ ತೆಪ್ಪವೇ ಆಸರೆಯಾಗಿದೆ.
ಮಸಾರಿ ನೆಲ್ಕುದ್ರಿ ಗ್ರಾಮದ ರೈತರ 500 ಎಕರೆ ಜಮೀನು ಚಿಮ್ಮನಹಳ್ಳಿ ಗ್ರಾಮದಲ್ಲಿ, ಹಳೇ ಚಿಮ್ಮನಹಳ್ಳಿ ಗ್ರಾಮದ ರೈತರ 200 ಎಕರೆಯಷ್ಟು ಜಮೀನು ಮಸಾರಿ ನೆಲ್ಕುದ್ರಿ ಪ್ರದೇಶದಲ್ಲಿರುವುದರಿಂದ ಅಲ್ಲಿಗೆ ತೆರಳುವುದಕ್ಕೆ ಬೆಲ್ಲ ತಯಾರಿಸುವ ಕೊಪ್ಪರಿಕೆ ಮತ್ತು ತೆಪ್ಪಗಳನ್ನೇ ಆಶ್ರಯಿಸಬೇಕಾಗಿದೆ.
ಮಾಲವಿ ಜಲಾಶಯ ನಿರ್ಮಾಣದ ಬಳಿಕ ಮೂರು ಗ್ರಾಮಗಳು ವಿಭಜನೆಯಾಗಿವೆ, ರೈತರ ಎರಡೂ ಭಾಗಗಳಲ್ಲಿಯೂ ಜಮೀನುಗಳಿವೆ, ನೆಲ್ಕುದ್ರಿ ಗ್ರಾಮ ಪಂಚಾಯ್ತಿ ಕಚೇರಿ ರಾಜ್ಯ ಹೆದ್ದಾರಿಯಲ್ಲಿರುವ ನೆಲ್ಕುದ್ರಿ ಗ್ರಾಮದಲ್ಲಿದೆ, ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ 500 ಮನೆಗಳಿದ್ದು, 2 ಸಾವಿರ ಜನಸಂಖ್ಯೆ ಇದೆ. ಐದು ಜನ ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಬಳಿಕ ನಾಲ್ಕು ಗ್ರಾಮಗಳ ಗ್ರಾಮಸ್ಥರ ನಿರ್ಧಾರದಂತೆ 50 ಮನೆಗಳಿರುವ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಚೇರಿ ನಿರ್ಮಾಣಗೊಂಡಿದೆ.
ಈಗ ಎರಡು ಗ್ರಾಮಗಳ ರೈತರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಭಕ್ತರು ಬೇರೆಡೆಗೆ ತೆರಳಲು ಕೇವಲ 600 ಮೀಟರ್ ಇರುವ ರಸ್ತೆಯನ್ನು 13 ಕಿ.ಮೀ. ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಮಸಾರಿ ನೆಲ್ಕುದ್ರಿ ಗ್ರಾಮಸ್ತರು ಪಂಚಾಯ್ತಿ ಮತ್ತು ಜಮೀನುಗಳಿಗೆ ತೆರಳಲು ಮಾಲವಿ ಮತ್ತು ಪಟ್ಟಣದ ಮೂಲಕ ತೆರಳಬೇಕಿದೆ.
ಚಿಮ್ಮನಹಳ್ಳಿ ಗ್ರಾಮಸ್ಥರು ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗೆ ಕೋಗಳಿ ಮೂಲಕ ಮಸಾಗಿ ನೆಲ್ಕುದ್ರಿಗೆ ತೆರಳುವುದಕ್ಕೆ ಪರಸ್ಪರ 13 ಕಿ.ಮೀ ಕ್ರಮಿಸಬೇಕಿದೆ. ಪಟ್ಟಣಕ್ಕೆ ವಿದ್ಯಾರ್ಥಿಗಳು ಹೋಗುವುದಕ್ಕೆ ಅಪಾಯದ ಕೊಪ್ಪರಿಕೆ ಮತ್ತು ತೆಪ್ಪದ ಸವಾರಿಯನ್ನೇ ಆಶ್ರಯಿಸಬೇಕಿದೆ, ಇದರಲ್ಲಿ ತೆರಳುವುದಕ್ಕೆ ಹಣ ಪಾವತಿಸಬೇಕಿದೆ.
ಇಲಾಖೆಯ ಎಇಇ ಹೆಚ್ಚುವರಿ ಹೊಣೆ ತೆಗೆದುಕೊಂಡು ಕೆಲವು ದಿನಗಳಾಗಿವೆ ಚಿಮ್ಮನಹಳ್ಳಿ ಸೇತುವೆ ನಿರ್ಮಾಣ ಕುರಿತು ಪರಿಶೀಲಿಸಲಾಗುವುದುರವಿನಾಯ್ಕ ಎಇಇ ಲೋಕೋಪಯೋಗಿ ಇಲಾಖೆ
ಚಿಮ್ಮನಹಳ್ಳಿ ದುರ್ಗಾಂಬಿಕಾ ದೇವಸ್ಥಾನ ಮುಂದೆ ಹಗರಿ ಹಳ್ಳದಲ್ಲಿ ಸೇತುವೆ ನಿರ್ಮಾಣಗೊಳ್ಳಬೇಕಿದೆ ಕಳೆದ ಆರು ದಶಕಗಳಿಂದ ಇದೇ ಸಮಸ್ಯೆ ಇದೆ. ಆದ್ದರಿಂದ ಹಳೇ ಚಿಮ್ಮನಹಳ್ಳಿಯಿಂದ ಮಸಾರಿ ನೆಲ್ಕುದ್ರಿಗೆ ತೆರಳಲು ಚಿಕ್ಕ ಹಗರಿಗೆ ಸೇತುವೆ ನಿರ್ಮಾಣ ಮಾಡಬೇಕಿದೆ. ಈ ಹಿಂದೆ ಸ್ಥಳಕ್ಕೆ ವಿವಿಧ ಜನಪ್ರತಿನಿಧಿಗಳು ಅಧಿಕಾರಿಗಳು ಭೇಟಿ ನೀಡಿದ್ದರು ಬೇಡಿಕೆ ಈಡೇರಿಲ್ಲ. ಜನಪ್ರತಿನಿಧಿಗಳು ಈ ಕುರಿತಂತೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ’ ಎಂದು ಐತಿಹಾಸಿಕ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಪೂಜಾರ ಸಿದ್ದಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.