ಹೊಸಪೇಟೆ (ವಿಜಯನಗರ): ನಾಡು 'ಕರ್ನಾಟಕ ಸಂಭ್ರಮ–50’ ಆಚರಿಸುತ್ತಿದ್ದು, ಕನ್ನಡ ಭಾಷೆಯ ಸಂಶೋಧನೆಗೆಂದೇ ಸ್ಥಾಪನೆಗೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ತಕ್ಷಣ ಅನುದಾನ ರೂಪದಲ್ಲಿ ಇದಕ್ಕೆ ₹25.32 ಕೋಟಿಯ ಅಗತ್ಯ ಇದೆ.
ಇತರ ವಿಶ್ವವಿದ್ಯಾಲಯಗಳಂತೆ ಹಣಕಾಸಿನ ಮೂಲ ಇಲ್ಲದಿರುವ ಕನ್ನಡ ವಿಶ್ವವಿದ್ಯಾಲಯ ಸಂಪೂರ್ಣವಾಗಿ ಸರ್ಕಾರ ನೀಡುವ ಅನುದಾನವನ್ನೇ ಅವಲಂಬಿಸಿದೆ. ವಿದ್ಯಾರ್ಥಿಗಳಿಂದ ಬರುವ ಶುಲ್ಕದ ರೂಪದಲ್ಲಿ ಇದುವರೆಗೆ ವಾರ್ಷಿಕ ₹20 ಲಕ್ಷ ಮಾತ್ರ ಸಂಗ್ರಹವಾಗುತ್ತಿತ್ತು. ಈ ವರ್ಷ ಶುಲ್ಕವನ್ನು ಸ್ವಲ್ಪ ಹೆಚ್ಚಿಸಲಾಗಿದ್ದು, ₹ 32 ಲಕ್ಷ ಸಂಗ್ರಹವಾಗುವ ನಿರೀಕ್ಷೆ ಇದೆ. ಆದರೆ ಈ ಶುಲ್ಕ ಪರೀಕ್ಷೆ, ಮೌಲ್ಯಮಾಪನ ಸಹಿತ ಬೋಧನೆಗೆ ಸಂಬಂಧಿಸಿದ ಖರ್ಚುಗಳಿಗೆ ವಿನಿಯೋಗವಾಗುತ್ತಿದ್ದು, ಇತರ ಎಲ್ಲಾ ವೆಚ್ಚಗಳಿಗೂ ಸರ್ಕಾರ ನೀಡುವ ಅನುದಾನಕ್ಕೆ ಕೈಯೊಡ್ಡಬೇಕಾದ ಸ್ಥಿತಿ ಇದೆ.
700 ಎಕರೆಯಷ್ಟು ವಿಸ್ತಾರವಾದ ‘ವಿದ್ಯಾರಣ್ಯ’ ಕ್ಯಾಂಪಸ್‌ನಲ್ಲಿ 18 ಅಧ್ಯಯನ ವಿಭಾಗಗಳಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಗೆ ವಸತಿನಿಲಯ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳು ನಿರ್ಮಾಣವಾಗಿವೆ. ಇಲ್ಲಿ ವಾರ್ಷಿಕವಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 250ರಿಂದ 300ರಷ್ಟು ಮಾತ್ರ.
ಇತರ ವಿಶ್ವವಿದ್ಯಾಲಯಗಳಂತೆ ಇಲ್ಲಿ ಕೂಡ ಬೋಧಕ, ಬೋಧಕೇತರ ಸಿಬ್ಬಂದಿಯ ಕೊರತೆ ಹೆಚ್ಚಿದೆ. 70 ಬೋಧಕೇತರ ಸಿಬ್ಬಂದಿ ಮತ್ತು 29 ಬೋಧಕ ಸಿಬ್ಬಂದಿಯ ಕೊರತೆ ಇದ್ದು, ಎರಡು ವರ್ಷದೊಳಗೆ ಆರೇಳು ಮಂದಿ ನಿವೃತ್ತರಾಗಲಿದ್ದಾರೆ. ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವಧನ ಗರಿಷ್ಠ ₹22 ಸಾವಿರ. ಇದರಿಂದ ಸಹಜವಾಗಿಯೇ ಬೋಧನೆಯ ಗುಣಮಟ್ಟದ ಮೇಲೆ ದುಷ್ಪರಿಣಾಮ ಬಿದ್ದಿದೆ. ಸಂಶೋಧನೆಗಳಿಗೆ ಸಹ ಅಡ್ಡಿ ಉಂಟಾಗಿದೆ.
ನಾವು ಬಹಳ ಕಷ್ಟದಲ್ಲಿದ್ದೇವೆ: ‘ನಮ್ಮದು ಸಂಶೋಧನೆಗೆಂದೇ ಸ್ಥಾಪನೆಗೊಂಡ ವಿಶ್ವವಿದ್ಯಾಲಯ. ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ರೂಪದಲ್ಲಿ 18 ತಿಂಗಳ ಬಾಕಿ ₹ 4.50 ಕೋಟಿ ನೀಡಬೇಕಿದೆ. ನಾವು ಬಹಳ ಕಷ್ಟದಲ್ಲಿದ್ದೇವೆ, ಮಂಜೂರು ಮಾಡಿಸಿ ಎಂದು ಕೇಳುತ್ತಿದ್ದಾರೆ. ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ದಿನ ದೂಡುತ್ತಿದ್ದೇನೆ. ಸರ್ಕಾರ ಈಗಲಾದರೂ ಅವರ ಕಷ್ಟ ಅರಿಯುತ್ತದೆ ಎಂಬ ಆಶಾಭಾವನೆ ಹೊಂದಿದ್ದೇನೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸದ್ಯ ವಾರ್ಷಿಕ ₹1.50 ಕೋಟಿ ಅನುದಾನ ಮೂರು ಕಂತುಗಳಲ್ಲಿ ಬಿಡುಗಡೆಯಾಗುತ್ತದೆ. ವಿದ್ಯಾರ್ಥಿಗಳ ಹಾಸ್ಟೆಲ್‌ನಂತಹ ಖರ್ಚಿಗೆ ನೀಡಿದ ಹಣವನ್ನು ಬೇರೆ ಯಾವ ಉದ್ದೇಶಕ್ಕೂ ಬಳಸುವಂತಿಲ್ಲ. ವಾರ್ಷಿಕ ₹6 ಕೋಟಿ ಅನುದಾನ ದೊರೆತರೆ ಮಾತ್ರ ವಿಶ್ವವಿದ್ಯಾಲಯವನ್ನು ಕ್ರಮಬದ್ಧವಾಗಿ ಮುನ್ನಡೆಸಲು ಸಾಧ್ಯ, ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ತೆರಿಗೆ, ವಿದ್ಯುತ್ ಬಿಲ್, ವೇತನ, ಶಿಷ್ಯವೇತನಕ್ಕಾಗಿ ₹25 ಕೋಟಿಯ ಅಗತ್ಯ ಇದೆ’ ಎಂದು ಅವರು ಹೇಳಿದರು.
ಅಲ್ಲದೇ, ಅನುದಾನ ಇಲ್ಲದೆ ಪ್ರಸಾರಾಂಗದ ಕಟ್ಟಡ, ರಸ್ತೆ ವಿಸ್ತೀರ್ಣ ಮಾಡುವುದು, ನೆಲ ಹಾಗೂ ಮೇಲ್ಮಟ್ಟದ ನೀರು ಸಂಗ್ರಹ/ವಿತರಣಾ ಕೇಂದ್ರದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.
ಕನ್ನಡಿಗರ ಬಗ್ಗೆ ಅಭಿಮಾನ ಹೊಂದಿರುವ ಈಗಿನ ರಾಜ್ಯ ಸರ್ಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚು ಅನುದಾನ ನೀಡಿ ಕನ್ನಡದ ಕೆಲಸ ಮಾಡುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು–ಪ್ರೊ. ಡಿ.ವಿ.ಪರಮಶಿವಮೂರ್ತಿ, ಕುಲಪತಿ ಕನ್ನಡ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.