ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗುವ ನಿಟ್ಟಿನಲ್ಲಿ ಹೊಸಪೇಟೆಯಿಂದ ಕೊಟ್ಟೂರು ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿದೆ.
ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಶುಕ್ರವಾರ ಇಲ್ಲಿನ ರೈಲ್ವೆ ಪ್ರಾದೇಶಿಕ ಅಧಿಕಾರಿ ಮುಕೇಶ್ ಕುಮಾರ್ ಅವರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ‘ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾದ ಹಂಪಿಯಿಂದ ರಾಜ್ಯದ ಇತರ ಪ್ರವಾಸಿ ತಾಣಗಳಾದ ಹಾಸನ, ಹಳೆಬೀಡು, ಬೇಲೂರು, ಶ್ರವಣಬೆಳಗೊಳ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಹಾಗೂ ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಕೇಂದ್ರಗಳಾದ ಮಣಿಪಾಲ-ಉಡುಪಿ-ಮಂಗಳೂರಿಗೆ ನೇರ ರೈಲು ಆರಂಭಿಸಬೇಕು. ಇದರಿಂದ ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೇ ಕಲ್ಯಾಣ ಕರ್ನಾಟಕ ಹೆಬ್ಬಾಗಿಲಿನಂತಿರುವ ವಿಜಯನಗರ ಜಿಲ್ಲೆ ಮತ್ತು ಬಂದರು ನಗರ ಮಂಗಳೂರಿಗೆ ನೇರ ಸಂಪರ್ಕ ದೊರೆತು, ವ್ಯಾಪಾರ ವಹಿವಾಟುಗಳು ವೃದ್ಧಿಯಾಗುತ್ತದೆ’ ಎಂದರು.
ಉಪಾಧ್ಯಕ್ಷ ಉಮಾಮಹೇಶ್ವರ್, ‘ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯ ಮಾರ್ಗವಾಗಿ ಈ ಹಿಂದೆ ಸಂಚರಿಸುತ್ತಿದ್ದ ಬೆಳಗಾವಿ-ಹೈದರಾಬಾದ್-ಭದ್ರಾಚಲಂ (07335/07336) ರೈಲಿನ ಸಂಚಾರವನ್ನು ಕಳೆದ 4 ತಿಂಗಳಿಂದ ರದ್ದುಪಡಿಸಿರುವುದು ಖಂಡನೀಯ. ಇದರಿಂದ ಈ ಜಿಲ್ಲೆಗಳಿಂದ ಮಂತ್ರಾಲಯ ಹಾಗೂ ರಾಯಚೂರು, ಹೈದರಾಬಾದ್ ಕಡೆಗೆ ಹೋಗುವ ಪ್ರಯಾಣಿಕರಿಗೆ ವಿಪರೀತ ತೊಂದರೆಯಾಗಿದೆ. ಕೂಡಲೇ ರೈಲು ಸಂಚಾರವನ್ನು ಪುನರ್ ಆರಂಭಿಸಬೇಕೆಂದು’ ಆಗ್ರಹಿಸಿದರು.
ಹೊಸಪೇಟೆ ನಿಲ್ದಾಣದಲ್ಲಿ ರೈಲುಗಳ ಸುಗಮ ಮತ್ತು ಸಕಾಲಕ್ಕೆ ಸಂಚರಿಸುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಪ್ಲಾಟ್‍ಫಾರಂಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.
ಮಹೇಶ್ ಕುಡುತಿನಿ, ಕೌತಾಳ್ ವಿಶ್ವನಾಥ್, ಎಲ್.ರಮೇಶ್ ಲಮಾಣಿ, ಸಿದ್ದಪ್ಪ.ಕೆ, ಬಿ.ವಿರುಪಾಕ್ಷಪ್ಪ, ಪಿ.ಪ್ರಭಾಕರ್, ಡಿ.ರಾಮಕೃಷ್ಣ, ಎಂ.ಶಂಕ್ರಪ್ಪ, ಕೆ.ವಿ.ರಾಮಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.