ಹಗರಿಬೊಮ್ಮನಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳಲ್ಲಿ ಕರ್ನಾಟಕ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ನಿಲಯವಿದೆ. ಹಗಲಲ್ಲಿ ಶಾಲೆಯ ಪಾಠ, ಊಟ, ಇರುಳಲ್ಲಿ ನಿದ್ದೆ!
ಇದು ತಾಲ್ಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದಲ್ಲಿರುವ ಹುಲಿಗೆಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕತೆ, ವ್ಯಥೆ. ಶಾಲೆಯ ಕೊಠಡಿಗಳಲ್ಲೇ ಕಳೆದ 9 ವರ್ಷಗಳಿಂದ ಬಾಲಕಿಯರ ವಸತಿ ನಿಲಯ ನಡೆಯುತ್ತಿದೆ. ಇಲ್ಲಿನ ಇಕ್ಕಟ್ಟಾದ ಸ್ಥಳದಲ್ಲಿಯೇ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿರುವ ಬಾಲಕಿಯರು ತಮ್ಮ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.
6ನೇ ತರಗತಿಯ 20, 7ನೇ ತರಗತಿಯ 26, 8ನೇ ತರಗತಿಯ 9, 9ನೇ ತರಗತಿಯ 9 , ಎಸ್‌ಎಸ್‌ಎಲ್‌ಸಿಯ 14 ಬಾಲಕಿಯರು ಸೇರಿ ಒಟ್ಟು 78 ವಿದ್ಯಾರ್ಥಿನಿಯರಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕೇವಲ ಪಾಠಕ್ಕಾಗಿ ಪಕ್ಕದ ಬಾಚಿಗೊಂಡನಹಳ್ಳಿ-1ರಲ್ಲಿರುವ ಕೌದಿ ಮಹಾಂತೇಶ್ವರ ಪ್ರೌಢಶಾಲೆಗೆ ತೆರಳುತ್ತಾರೆ.
ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ಅಡುಗೆ ಮತ್ತು ಉಗ್ರಾಣ ಕೋಣೆಯನ್ನಾಗಿಸಲಾಗಿದೆ, ಅದರಲ್ಲಿಯೇ ಶಾಲೆಯ ಮದ್ಯಾಹ್ನದ ಬಿಸಿಯೂಟ ಮತ್ತು ವಸತಿ ನಿಲಯದ ಅಡುಗೆ ಮಾಡಲಾಗುತ್ತಿದೆ.
78 ಬಾಲಕಿಯರಿಗೆ 4 ಸ್ನಾನಗೃಹ ಮತ್ತು 4 ಶೌಚಾಲಯಗಳಿವೆ, ಬಯಲಿನಲ್ಲಿಯೇ ಬಟ್ಟೆ ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆ ವಿದ್ಯಾರ್ಥಿನಿಯರಿಗೆ ಒದಗಿಬಂದಿದೆ. ವಸತಿ ನಿಲಯದ ಬಾಲಕಿಯರು ಆಟೋಟಗಳಿಂದ ವಂಚಿತರಾಗಿದ್ದಾರೆ. ಶಾಲೆ ಮತ್ತು ವಸತಿ ಕೊಠಡಿ ಒಂದೇ ಆಗಿರುವುದರಿಂದ ಶಾಲೆಯ ವಾತಾವರಣದಿಂದ ಹೊರ ಬರದಂತಾಗಿದ್ದಾರೆ.
ಶಾಲಾ ಮತ್ತು ವಸತಿ ನಿಲಯಕ್ಕಾಗಿ ಪ್ರತ್ಯೇಕವಾದ ಸುಸಜ್ಜಿತವಾದ ಕಟ್ಟಡಗಳನ್ನು ನಿರ್ಮಿಸಬೇಕೆನ್ನುವುದು ಗ್ರಾಮದ ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.
ಕಸ್ತೂರ ಬಾ ಗಾಂಧಿ ವಸತಿ ನಿಲಯದ ಸುಸಜ್ಜಿತ ಕಟ್ಟಡ ನಿರ್ಮಿಸುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದುಮೈಲೇಶ್ ಬೇವೂರು ಕ್ಷೇತ್ರ ಶಿಕ್ಷಣಾಧಿಕಾರಿ
ಸರ್ಕಾರ ಕೂಡಲೇ ಹುಲಿಗೆಮ್ಮಜ್ಜಿ ನೀಡಿದ ಜಮೀನಿನಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಿಸಬೇಕು ಅದರ ಮೂಲ ಉದ್ಧೇಶ ಈಡೇರಬೇಕುಎಚ್.ದೊಡ್ಡಬಸಪ್ಪ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.