ಹೊಸಪೇಟೆ (ವಿಜಯನಗರ): ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಕರೆಯಂತೆ ಶನಿವಾರ ಇಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ವಿವಿಧ ಸಂಘಗಳ ವತಿಯಿಂದ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಸಂಸದರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರಾಂತ ರೈತ ಸಂಘದ ಸಂಚಾಲಕ ಎನ್.ಯಲ್ಲಾಲಿಂಗ, ದಲಿತ ಹಕ್ಕು ಸಮಿತಿಯ ಜಿಲ್ಲಾ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಮತ್ತು ಇತರ ಹಲವು ನಾಯಕರು ಪ್ರತಿಭಟನೆ ನಡೆಸಿ ಬಳಿಕ ಸಂಸದ ಇ.ತುಕಾರಾಂ ಅವರಿಗೆ ಮನವಿ ಕಳುಹಿಸಿಕೊಟ್ಟರು.
ಮನವಿಯಲ್ಲಿ 12 ಹಕ್ಕೊತ್ತಾಯಗಳು, ನೀತಿ ಸಂಬಂಧಿತ ಏಳು ಬೇಡಿಕೆಗಳ ಜತೆಯಲ್ಲಿ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ವಿವಿಧ ಕಾಯ್ದೆಗಳ ಅಡಿಯಲ್ಲಿ ಸಲ್ಲಿಸಲಾದ ಫಾರಂ 57, ಫಾರಂ 1, 1ಎ ಅರ್ಜಿಗಳನ್ನು ಪರಿಶೀಲಿಸಿ ಪಟ್ಟಾ, ಪಹಣಿ ನೀಡಬೇಕು, ಭೂ ಸ್ವಾಧೀನ ಕಾಯ್ದೆ 1894ರ ಕಲಂ 28 (ಎ) 2013ರ ನಡಾವಳಿಯಂತೆ ಗಾದಿಗನೂರು, ಪಾಪಿನಾಯಕನಹಳ್ಳಿ ಮತ್ತು ಕೊಟಗಿನಹಾಳ್‌ನಲ್ಲಿ ಭೂಮಿ ಕಳೆದುಕೊಂಡ ಸೂಕ್ತ ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.