ಹೊಸಪೇಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತರೆ ಹಿಂದುಳಿದ ವರ್ಗದವರಿಗೆ (ಒಬಿಸಿ) ನ್ಯಾಯೋಚಿತ ಮೀಸಲಾತಿ ಒದಗಿಸಲು ಚುನಾವಣಾ ಆಯೋಗ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ವಿಜಯನಗರ ನಾಗರಿಕ ವೇದಿಕೆ ಕಾರ್ಯಕರ್ತರು ಗುರುವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಚುನಾವಣಾ ಆಯುಕ್ತರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಸಲ್ಲಿಸಿದರು.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳನ್ನು ಜನತಂತ್ರದ ತೊಟ್ಟಿಲುಗಳೆಂದು ಕರೆಯಲಾಗಿದೆ. ಸ್ಥಳೀಯ ಜನರ ಪಾಲ್ಗೊಳ್ಳುವಿಕೆ ಮೂಲಕ ಸ್ಥಳೀಯ ಸಮಸ್ಯೆಗೆ ಸ್ಪಂದಿಸಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಭ್ರಷ್ಟ ರಾಜಕಾರಣಿಗಳಿಂದ ಯಾವುದೇ ಜನಪರ ಕೆಲಸಗಳು ಆಗುತ್ತಿಲ್ಲ. ಮತದಾರರ ಬಡತನ, ಅನಕ್ಷರತೆ, ಸಾಮಾಜಿಕ ಪ್ರಜ್ಞೆಯ ಕೊರತೆಯನ್ನು ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಮತದಾರರಿಗೆ ಹಣದ ಆಮಿಷವೊಡ್ಡಿ ಪ್ರಜಾತಂತ್ರ ವ್ಯವಸ್ಥೆ ಕುಲಗೆಡಿಸುತ್ತಿದ್ದಾರೆ. ಅದರಲ್ಲಿ ಸುಧಾರಣೆ ತರುವ ಅಗತ್ಯವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ವಂಚಿತ ಸಮುದಾಯಗಳಿಗೆ ಮೀಸಲು ಸೌಲಭ್ಯವೂ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ರೀತಿಯ ಅವ್ಯವಹಾರ, ಹಣದ ಆಮಿಷ, ಒತ್ತಡಕ್ಕೆ ಒಳಗಾಗದೆ ಮತದಾರರು ಮುಕ್ತವಾಗಿ ಮತ ಚಲಾಯಿಸುವ ವಾತಾವರಣ, ಅರಿವು ಚುನಾವಣಾ ಆಯೋಗ ಮೂಡಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಎಚ್. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಯು. ಆಂಜನೇಯಲು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.