ಹೊಸಪೇಟೆ : ದೇವರಾಜ ಅರಸು ಅವರು ಸಾಮಾಜಿಕ ಸುಧಾರಣೆ ತಂದರು. ಅದನ್ನು ನಾವು ನಿರಂತರವಾಗಿ ಮುಂದುವರಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ.ಹೇಳಿದರು.
ಇಲ್ಲಿ ಭಾನುವಾರ ಅರಸು ಅವರ 108ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಅವರು ಮಹಾನ್ ದಾರ್ಶನಿಕ ಮತ್ತು ದೂರದೃಷ್ಟಿ ಇದ್ದವರು. ಅವರಿಂದಾಗಿ ಸಮಾಜದಲ್ಲಿ ಹಿಂದುಳಿದ ವರ್ಗದವರು ತಲೆ ಎತ್ತಿ ಬದುಕುವುದು ಸಾಧ್ಯವಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಜಿ. ಮಾತನಾಡಿ, ಅರಸು ಅವರ ಕೊಡುಗೆ ಅಪಾರ, ಅವರ ಸಾಮಾಜಿಕ ತುಡಿತ ಎಲ್ಲರಿಗೂ ಮಾದರಿ ಎಂದರು.
'ಕರ್ನಾಟಕ ಕಂಡ ಇಬ್ಬರು ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರು ರಾಮಕೃಷ್ಣ ಹೆಗಡೆ, ಮತ್ತೊಬ್ಬರು ದೇವರಾಜ ಅರಸು. ಇವರಿಂದಾಗಿಯೇ ರಾಜ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿ ನಡೆಯುವುದು ಸಾಧ್ಯವಾಯಿತು' ಎಂದು ನಿವೃತ್ತ ಉಪನ್ಯಾಸಕ ವೈ.ಯಮುನೇಶ್ ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ ನೀಡಿದ ಅವರು, ಉಳುವವನೇ ಹೊಲದೊಡೆಯ ಎಂಬ ಕಾನೂನನ್ನು ಜಾರಿಗೆ ತಂದು, ಸಮಾಜದಲ್ಲಿನ ಹಲವು ಅನಿಷ್ಟಗಳನ್ನು ನಿರ್ಮೂಲನೆ ಮಾಡುವ ಮೂಲಕ ಸಮಾಜದಲ್ಲಿ ಹಲವರು ತಲೆ ಎತ್ತಿ ಬದುಕುವಂತೆ ಮಾಡಿದರು ಎಂದು ಅವರು ಹೇಳಿದರು.
'ದೇವರಾಜ ಅರಸು ಅವರು ಜಾರಿಗೆ ತಂದ ಮೀಸಲಾತಿ ನೀತಿಯಿಂದಾಗಿಯೇ ನನ್ನಂತಹವರು ಸಹ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕ ಆಗುವುದು ಸಾಧ್ಯವಾಯಿತು' ಎಂದರು.
1977ರಲ್ಲಿ ದೇಶದಲ್ಲಿ ಕಾಂಗ್ರೆಸ್ ದೂಳೀಪಟವಾಗಿದ್ದಾಗ ರಾಜ್ಯದಲ್ಲಿ 28ಕ್ಕೆ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಂತೆ ಮಾಡಿದ್ದು ದೇವರಾಜ ಅರಸರು. ರಾಜ್ಯದಲ್ಲಿ ಅರಸು ಅವರು ತಂದಿದ್ದ ಜನಪರ ನೀತಿಗಳೇ ಅವರ ಕೈಹಿಡಿದಿದ್ದವು ಎಂದು ಅವರು ಅಭಿಪ್ರಾಯಪಟ್ಟರು.
ವಿಜಯನಗರ ಜಿಲ್ಲೆಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಹಿಂದುಳಿದ ವರ್ಗದವರಿಗೆ ಹೆಚ್ಚಿನ ಹಾಸ್ಟೆಲ್ ಗಳನ್ನು ನಿರ್ಮಿಸಬೇಕು ಎಂದರು.
ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಬಿ.ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.