ಹಗರಿಬೊಮ್ಮನಹಳ್ಳಿ: ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು ನಾರಾಯಣದೇವರಕೆರೆ ಗ್ರಾಮ ಮುಳುಗಡೆ ಬಳಿಕ ಸ್ಥಳಾಂತರಗೊಂಡ ಲೋಕಪ್ಪನಹೊಲ ಗ್ರಾಮದಲ್ಲಿ ಈಗ ಗುಳೇಲಕ್ಕಮ್ಮ ಹಾಗೂ ಊರಮ್ಮದೇವಿ ದೇವಿ ಜಾತ್ರೋತ್ಸವ ಸಡಗರ ಸಂಭ್ರಮ ಮನೆಮಾಡಿದೆ.
ಒಂಭತ್ತು ವರ್ಷಗಳ ಬಳಿಕ ನಡೆಯುತ್ತಿರುವುದರಿಂದ ಜಾತ್ರೆಯ ರಂಗು, ಸೊಬಗು ಮತ್ತಷ್ಟು ಹೆಚ್ಚಿಸಿದೆ. ದೇವಸ್ಥಾನದಲ್ಲಿ ಗಟ್ಟಿ ಗಡಿಗೆ ಪ್ರತಿಷ್ಠಾಪಿಸಿದ ನಂತರ ಒಂಭತ್ತು ದಿನಗಳು ಗ್ರಾಮದ ಮುಖ್ಯ ರಸ್ತೆಯಲ್ಲಿ ಎರಡೂ ಭಾಗದಲ್ಲಿ ಇಬ್ಬರು ಕಾವಲುಗಾರರು, ಯಾವುದೇ ಅಪರಿಚಿತರ ವಾಹನಗಳು ಗ್ರಾಮದ ಒಳಗೆ ಪ್ರವೇಶಿಸುವಂತಿಲ್ಲ, ಬಂದರೂ ಹೊರಗೆ ಹೋಗುವಂತಿಲ್ಲ. ಒಂಬತ್ತನೇ ದಿನದಂದು ಗುಳೇ ಲಕ್ಕಮ್ಮನ ಮೂರ್ತಿಯನ್ನು ಗ್ರಾಮದ ಹೊರಗೆ ಚೌತಿ ಕಟ್ಟೆಯ ಮೇಲೆ ನಿರ್ಮಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದ ನಂತವಷ್ಟೆ ಗ್ರಾಮದಲ್ಲಿ ಮುಕ್ತ ಓಡಾಟ ಎನ್ನುತ್ತಾರೆ ಮುಖ್ಯ ಅರ್ಚಕರು.
ಇದೇ 14ರಿಂದ ಆರಂಭಗೊಂಡಿರುವ ಧಾರ್ಮಿಕ ಕಾರ್ಯಕ್ರಮಗಳು 22ಕ್ಕೆ ಮುಕ್ತಾಯಗೊಳ್ಳುತ್ತವೆ. ಕೊನೆಯ ದಿನ ಗ್ರಾಮದಲ್ಲಿ ಡೊಳ್ಳು, ಹಲಗೆ, ಡ್ರಮ್ಸ್ ಸೇರಿದಂತೆ ವಿವಿಧ ವಾದ್ಯಗಳು ಮಾರ್ದನಿಸುತ್ತವೆ.
ಮೇ 21ರಂದು ಬೆಳಿಗ್ಗೆ 11ರಿಂದ ಊರಮ್ಮದೇವಿಯ ನೆಲೆ ಹಾಕುವುದು, ಬಳಿಕ ಪೂಜೆ ನಡೆಸುವುದು, ರಾತ್ರಿ 10ರಿಂದ 12ರವರೆಗೆ ಗುಳೇಲಕ್ಕಮ್ಮ ದೇವಿಯನ್ನು ನೆಲೆಹಾಕಿ ಅಭಿಷೇಕ ಮಾಡುವುದು, ಮೇ 22ರಂದು ಮಧ್ಯರಾತ್ರಿ 1ರಿಂದ ಗಟ್ಟಿಗಡಿಗೆ ಸಮೇತ ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮೂಲಕ ಚೌಕಿ ಮನೆಗೆ ಕರೆತರುವ ಸಂಪ್ರದಾಯ ವಿಜೃಂಭಣೆಯಿಂದ ನಡೆಯುತ್ತದೆ.
ಗ್ರಾಮದಲ್ಲಿ ಅಂದಾಜು ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ದೇವಸ್ಥಾನದಲ್ಲಿ ಒಂಭತ್ತು ದಿನ ವಿಶೇಷ ಪೂಜೆಗಳು ನಡೆಯುಯುತ್ತವೆ. ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.
ಗ್ರಾಮಕ್ಕೆ ಯಾವುದೇ ವಿಘ್ನಗಳು ಬಾರದಿರಲಿ ಎನ್ನುವ ಕಾರಣಕ್ಕಾಗಿ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಗ್ರಾಮದ ಮುಖಂಡರು. ನಾರಾಯಣದೇವರಕೆರೆ, ಹೊಸಪೇಟೆ, ಕಂಪ್ಲಿ, ಮರಿಯಮ್ಮನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಖ್ಯಾತ ಕುಸ್ತಿಪಟುಗಳು ಆಗಮಿಸುತ್ತಿರುವುದು ವಿಶೇಷ. ತಾಲ್ಲೂಕಿನ ಹಿರಿಮೆ ಅಂಕಸಮುದ್ರ ಪಕ್ಷಿ ಸಂರಕ್ಷಿತ ವಲಯ ಅಂತರರಾಷ್ಟ್ರೀಯ ಮನ್ನಣೆಯ ಚೌಗು ಪ್ರದೇಶ (ರಾಮ್‍ಸರ್ ಸೈಟ್) ಆಗಿರುವುದು ಇಲ್ಲಿಗೆ ಭೇಟಿ ಕೊಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಾತ್ರೆಗೆ ಆಗಮಿಸುವ ಅತಿಥಿಗಳೆಲ್ಲರೂ ಭೇಟಿ ನೀಡಿ ಪಕ್ಷಿಗಳ ಕಲರವವನ್ನು ಕಣ್ತುಂಬಿಕೊಳ್ಳಬಹುದು.
2015ರಲ್ಲಿ ಏಪ್ರಿಲ್ 29ರಂದು ಕಳೆದ ಬಾರಿಯ ಜಾತ್ರೆ ನಡೆದಿತ್ತು. 2020ರಲ್ಲಿ ಮುಂದಿನ ಜಾತ್ರೆ ನಡೆಯಬೇಕಿತ್ತು. ಆದರೆ ನಾಡಿಗೆ ಕೋವಿಡ್ ಆತಂಕ ಆವರಿಸಿದ್ದರಿಂದ ಆ ವರ್ಷ ಜಾತ್ರೆ ನಡೆಯಲಿಲ್ಲ. 6ರಿಂದ 8 ವರ್ಷದೊಳಗೆ ಜಾತ್ರೆ ಮಾಡುವಂತಿಲ್ಲ. ಹೀಗಾಗಿ ಒಂಭತ್ತನೇ ವರ್ಷಕ್ಕೆ ಜಾತ್ರೆ ಆಯೋಜಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.