ಹರಪನಹಳ್ಳಿ: ದಿನಾಲು ಹಚ್ಚುವ ದೀಪಕ್ಕಿಂತ ದೀಪಾವಳಿ ಹಬ್ಬದಂದು ಬೆಳಗುವ ಹಣತೆಗಳು ವಿಶಿಷ್ಠವಾಗಿರುತ್ತವೆ. ಶ್ರೀಮಂತರ ಮನೆಯಲ್ಲಿ ಚಿನ್ನಾಭರಣ, ನೋಟು, ನಾಣ್ಯಗಳು ಪೂಜಿಸುವುದು ಸಂಪ್ರದಾಯ ಎನಿಸಿದರೆ, ಬುಡಕಟ್ಟು ಸಮುದಾಯಗಳಲ್ಲಿ ಸಾಕುಪ್ರಾಣಿ, ಗಿಡಮರಗಳಿಗೆ ಸಲ್ಲಿಸುವ ಪೂಜೆಗಳು ಗಮನ ಸೆಳೆಯುತ್ತವೆ.
ಪಾಂಡವರು ಅಜ್ಞಾತವಾಸ ಮುಗಿಸಿ ನಾಡಿಗೆ ಮರಳುವ ವೇಳೆ ವಿರಾಟರಾಯನಿಗೆ ಸೇರಿದ್ದ ಗೋವುಗಳನ್ನು ಕೌರವರು ಅಪಹರಿಸಿಕೊಂಡು ಹೋಗುತ್ತಾರೆ. ಇದನ್ನು ತಿಳಿದ ಪಾಂಡವರ ಅರ್ಜುನ, ತಕ್ಷಣ ಗೋವುಗಳನ್ನು ರಕ್ಷಿಸಿ ಕೌರವರ ಕಪಿಮುಷ್ಟಿಯಿಂದ ಪಾರು ಮಾಡಿದ ಮಹಾಭಾರತದ ಈ ಕಥೆ ಎಲ್ಲರ ಸ್ಮೃತಿಯಲ್ಲಿ ಹರಿದಾಡುತ್ತದೆ. ಇದು ಬುಡಕಟ್ಟು ಗೌಳೇರರಿಗೆ ಸಂಭ್ರಮ ತರುವ ಕಾರಣ ದೀಪಾವಳಿ ಆಚರಣೆಗೂ ಮೆರುಗು ಬರುತ್ತದೆ.
ಜನಪದೀಯ ಹಾಡುಗಳು, ಆಚರಣೆಗಳಿಂದ ಗಮನ ಸೆಳೆಯುವ ಲಂಬಾಣಿ ಸಮುದಾಯವು ದೀಪಾವಳಿಗೆ ಮುಖ್ಯ ಹಬ್ಬದ ಸ್ಥಾನ ಕಲ್ಪಿಸಿದೆ. ಗುಣ್ಯೋಪುಲ್ಯೋ ಧರಿಸಿ, ಬುಟ್ಟಿ ಹೊತ್ತು ಸಾಗುವ ಯುವತಿಯರ ದಂಡು, ಕಾಡಿನಲ್ಲಿ ಸಿಗುವ ವಲ್ಲೇಣ ಗಿಡದ ಹೂವು ಸಂಗ್ರಹಿಸಿ, ಮನೆಗೆ ಹಿಂತಿರುಗಿ ಹಬ್ಬದ ಸಂಭ್ರಮ ವಿನಿಮಯ ಮಾಡಿಕೊಳ್ಳುವಾಗ ಹಾಡು, ನೃತ್ಯಗಳು ನವಿಲಿನ ಕುಣಿತ ನೆನಪಿಸುತ್ತವೆ. ಮಗಳನ್ನು ಗಂಡನ ಮನೆಗೆ ಕಳಿಸುವಾಗ ಪೋಷಕರು ಅಳುವ ಪ್ರಸಂಗಗಳದ್ದು ಮತ್ತೊಂದು ವೈಶಿಷ್ಠ್ಯ.
ಬುಡಕಟ್ಟು ಸಮುದಾಯಗಳ ಹಬ್ಬಗಳನ್ನು ನೋಡುವುದೇ ಒಂದು ಸಂಭ್ರಮ. ವಿಜಯನಗರ ಜಿಲ್ಲೆ ಪ್ರವಾಸೋದ್ಯಮಕ್ಕೆ ವಿಶಿಷ್ಠ ಆಯಾಮ ನೀಡುವ ಜಿಲ್ಲೆಯೂ ಆಗಿದ್ದು, ದೀಪಾವಳಿಯಂತಹ ಆಚರಣೆಗಳು ಇದಕ್ಕೆ ಮತ್ತಷ್ಟು ಮೆರುಗು ತರುವ ಶಕ್ತಿ ಹೊಂದಿವೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬುಡಕಟ್ಟು ಸಮುದಾಯಗಳ ದೀಪಾವಳಿ ಆಚರಣೆಗೆ ಪ್ರವಾಸೋದ್ಯಮದ ಸ್ಪರ್ಶ ನೀಡುವ ಕೆಲಸ ಆಗಬೇಕು ಎಂಬ ಕಳಕಳಿ ವ್ಯಕ್ತವಾಗಿದೆ.
ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಮನೆ ಅಂಗಡಿಗೆ ಸುಣ್ಣಬಣ್ಣ ಹಚ್ಚುತ್ತಾರೆ. ನಿತ್ಯ ಜೀವನ ಬಂಡಿ ಸಾಗಿಸುವ ಗೌಳಿಗರ ಬದುಕಿನ ಭಾಗವಾಗಿರುವ ಎಮ್ಮೆಗಳಿಗೆ ಕ್ಷೌರ ಮಾಡಿಸಿ ಎಣ್ಣೆ ಮಜ್ಜನ ಮಾಡಿಸಿ ಸಾಂಪ್ರದಾಯಿಕವಾಗಿ ಕಬ್ಬಿಣದ ಸಲಾಕೆ ಬೆಂಕಿಯಲ್ಲಿ ಕಾಯಿಸಿ ಮುದ್ರೆ ಒತ್ತುತ್ತಾರೆ. ಅವುಗಳನ್ನು ಸಿಂಗಾರ ಮಾಡಿ ಪಟ್ಟಣದ ಗೌಳೇರ ಬೀದಿಯಲ್ಲಿ ಬೆದರಿಸುವ ಆಟವಾಡಿಸುತ್ತಾರೆ. ಹೆಗಲಮೇಲೆ ಕಂಬಳಿ ಕೈಯಲ್ಲಿ ಕೋಲು ಹಿಡಿದು ಸನ್ನೆ ಮಾಡುವ ಮಾಲೀಕ ಓಡು ಎಂದರೆ ಎಮ್ಮೆಗಳು ಓಡುತ್ತವೆ ನಿಲ್ಲು ಎಂದರೆ ನಿಲ್ಲುತ್ತವೆ. ತನ್ನ ಒಡೆಯನ ಬಲಗೈ ಎಡಗೈ ಸನ್ನೆ ನೋಟಕ್ಕೆ ಸ್ಪಂದಿಸುವ ಎಮ್ಮೆಗಳು ಬನ್ನಿ ಕಾಳಮ್ಮ ದೇವಿಗೆ ಮಂಡಿ ಊರಿ ಬೈಠಾಕ್ ಹಾಕುತ್ತವೆ. ಅಂಗಡಿ ಒಳ ಪ್ರವೇಶಿಸಿ ಕಾಣಿಕೆ ಪಡೆಯುತ್ತವೆ. ಗೋವೆರಹಳ್ಳಿ ಹರಪನಹಳ್ಳಿ ಹಾಕರನಾಳು ಗ್ರಾಮಗಳಲ್ಲಿರುವ ಗೌಳಿಗರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.