ಹಂಪಿ(ವಿಜಯನಗರ): ಹಂಪಿ ಉತ್ಸವದ ಮೂರನೇ ದಿನ ಭಾನುವಾರ ಕಮಲಾಪುರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ನಡೆದ ಶ್ವಾನ ಪ್ರದರ್ಶನ ಚಿಣ್ಣರಿಂದ ವೃದ್ಧರವರೆಗೆ ಎಲ್ಲ ವಯಸ್ಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಹಂಪಿ ವಿಶ್ವ ಪಾರಂಪರಿಕ ತಾಣ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಬದಿಯ ವಿಶಾಲ ಮೈದಾನದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ 19 ತಳಿಗಳ 65 ಶ್ವಾನಗಳನ್ನು ವೀಕ್ಷಿಸಲು ಕಿಕ್ಕಿರಿದು ಜನ ಸೇರಿದ್ದರು. ಬಿಸಿಲನ್ನೂ ಲೆಕ್ಕಿಸದೆ ಶ್ವಾನಪ್ರಿಯರು ಕೊನೆಯವರೆಗೂ ಸ್ಥಳದಿಂದ ಕದಲದೇ ಆಸೀನರಾಗಿದ್ದರು. ಅಪರೂಪದ ವೈಶಿಷ್ಟ್ಯ ಹೊಂದಿದ್ದ ಶ್ವಾನಗಳ ಬುದ್ಧಿಮತ್ತೆಗೆ ಹುಬ್ಬೇರಿಸಿದರು.
ಮುಧೋಳ, ಡಾಬರ್ ಮನ್, ಲ್ಯಾಬ್, ಜರ್ಮನ್ ಶೆಫರ್ಡ್, ಗ್ರೇಟ್ ಡೆನ್, ಹಸ್ಸಿ, ಚೌಚೌ, ಪಾಮ್ ಟಾಯ್, ಅಮೆರಿಕನ್ ಬುಲ್ಲಿ, ಪಾಕಿಸ್ತಾನ್ ಬುಲ್ಲಿ, ಅಕಿಟಾ, ನ್ಯೂ ಪೌಂಡ್ ಲ್ಯಾಂಡ್ ತಳಿಗಳ ಶ್ವಾನಗಳ ಪ್ರದರ್ಶನ ಮೂರು ಗಂಟೆಗಳ ಕಾಲ ನಡೆಯಿತು.
ಸ್ವರ್ಧೆಯ ಹಣಾಹಣಿಯಲ್ಲಿ ವೀರು ಅವರ ಗ್ರೆಟ್ ಡೆನ್(ಬ್ರಾಂಡಿ) ಪ್ರಥಮ ಸ್ಥಾನ ಗಳಿಸಿ ₹10 ಸಾವಿರ ನಗದು ಪಡೆಯಿತು, ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿ ಅವರ ಡಾಬರ್ ಮನ್(ರ‍್ಯಾಂಡಿ) ದ್ವಿತೀಯ ಸ್ಥಾನ ₹7,500 ನಗದು, ಬಸವರಾಜ ಅವರ ಮುಧೋಳ(ಚಿಂಟು) ತೃತೀಯ ₹5 ಸಾವಿರ ಬಹುಮಾನ ಪಡೆಯಿತು.
ಶ್ರೇಯಸ್ ಅವರ ಟಾಯ್ ಪೋಮ್, ಶಿವಪ್ರಸಾದ ಅವರ ಸೈಬೇರಿಯನ್ ಹಸ್ಸಿ, ಕಾರ್ತಿಕ್ ಅವರ ಬೀಗಲ್,ಲಕ್ಷ್ಮೀನಾರಾಯಣ ಅವರ ಶೀಟ್ಜ್‌ಗೆ ಸಮಾಧಾನಕರ ಬಹುಮಾನ ಲಭಿಸಿತು.
ಆರಂಭದಲ್ಲಿ ತಳಿಗಳವಾರು ಸ್ಪರ್ಧೆ ನಡೆಸಲಾಯಿತು. ವಯಸ್ಸು, ಬೆಳವಣಿಗೆ, ಅಂಗರಚನೆ ಆಧಾರದಲ್ಲಿ ಮೊದಲ ಸ್ಥಾನ ಪಡೆದ ಸ್ಥಾನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಅತಿ ಕುಳ್ಳ ಶ್ವಾನ ಕೇವಲ ಅರ್ಧ ಅಡಿ ಎತ್ತರದ ಡ್ಯಾಷ್ ಹೌಂಡ್ ಮತ್ತು ಅತೀ ಎತ್ತರದ ಗ್ರೇಟ್ ಡೆನ್ ನೋಡುಗರ ಗಮನ ಸೆಳೆದವು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಪೋಮಸಿಂಗ್, ಸಹಾಯಕ ನಿರ್ದೇಶಕ ಬಸವರಾಜ ಬೆಣ್ಣಿ ಇದ್ದರು. ಡಾ.ಬಸವರಾಜ ಬಾಳಪ್ಪನರ್, ಬಸವೇಶ ಹೂಗಾರ, ಎನ್.ಎಸ್.ಶ್ರೀಪಾದ ಅವರು ತೀರ್ಪುಗಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.