ADVERTISEMENT

ಹೊಸಪೇಟೆ | ಕತ್ತೆ ಹಾಲು ವಂಚನೆ ಪ್ರಕರಣ: ಮತ್ತೆ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:28 IST
Last Updated 16 ಅಕ್ಟೋಬರ್ 2024, 14:28 IST
<div class="paragraphs"><p>ಶ್ರೀಹರಿಬಾಬು ಬಿ.ಎಲ್‌.</p></div>

ಶ್ರೀಹರಿಬಾಬು ಬಿ.ಎಲ್‌.

   

ಹೊಸಪೇಟೆ (ವಿಜಯನಗರ): ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸಿ ಮೋಸ ಮಾಡಿದ ಆರೋಪದ ಮೇರೆಗೆ ಜೆನ್ನಿ ಮಿಲ್ಕ್ ಕಂಪನಿಯ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದರು.

ಬಂಧಿತರು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಎನ್.ಹರ್ಷವರ್ಧನ ರಾಜು (40) ಮತ್ತು ಆಂಧ್ರದ ರಾಚೋಟಿ ಮೂಲದ, ಸದ್ಯ ನಂಜನಗೂಡಿನ ಚಾಮಲಪುರ ಉಂಡಿಯಲ್ಲಿ ವಾಸವಿರುವ ಗುರ್ರಂ ಯೋಗಾನಂದ ರೆಡ್ಡಿ (34) , ಪಾವಗಡ ಹೊರವಲಯದಲ್ಲಿ ಇವರನ್ನು ಬುಧವಾರ ಬೆಳಿಗ್ಗೆ ಬಂಧಿಸಲಾಯಿತು ಎಂದು ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪ್ರಕರಣದಲ್ಲಿ ಇದುವರೆಗೆ ಒಟ್ಟು 5 ಮಂದಿಯನ್ನು ಬಂಧಿಸಿದಂತಾಗಿದೆ. 33 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಒಟ್ಟು ಎಷ್ಟು ಹಣ ವಂಚಿಸಲಾಗಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸಿಐಡಿ ತನಿಖೆಗೆ ಕೋರಿಕೆ ಸಲ್ಲಿಸಿದ್ದು, ಶೀಘ್ರ ಆದೇಶ ಹೊರಬೀಳುವ ನಿರೀಕ್ಷೆ ಇದೆ ಎಂದರು.

ಘಟನೆ ಹಿನ್ನೆಲೆ: ಮೇ ತಿಂಗಳಲ್ಲಿ ನಗರದ ಪಿವಿಕೆ ಪ್ಲಾಜಾದಲ್ಲಿ ಆರೋಪಿಗಳು ಜೆನ್ನಿ ಮಿಲ್ಕ್ ಎಂಬ ಕಂಪನಿಯನ್ನು ಪ್ರಾರಂಭಿಸಿ, ರೈತರಿಂದ ಪ್ರತಿ ಯುನಿಟ್‍ಗೆ ₹3 ಲಕ್ಷ ಹಣ ಪಡೆದು, ಅವರಿಗೆ ಮೂರು ತಾಯಿ ಕತ್ತೆಗಳು, ಮೂರು ಕತ್ತೆ ಮರಿಗಳು, ಒಂದು ಡೀಪ್ ಫ್ರಜ್ಡ್ ಹಾಗೂ ಹಾಲು ಸಂಗ್ರಹಕ್ಕಾಗಿ ಬಾಟಲಿಗಳನ್ನು ಕೊಟ್ಟು, ರೈತರಿಂದ ಪ್ರತಿ ಲೀಟರ್‌ಗೆ ₹2,350ರಂತೆ ಹಾಲು ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದರು.

ನಂತರ ರೈತರಿಗೆ ಕತ್ತೆಗಳನ್ನು ಕೊಟ್ಟು, ಮರಳಿ ಅವರಿಂದ ಹಾಲು ಸಂಗ್ರಹಿಸಿ ಜನರಲ್ಲಿ ನಂಬಿಕೆ ಹುಟ್ಟಿಸಿದ್ದರು. ಈ ಸಂದರ್ಭದಲ್ಲಿ 318 ಜನ ಗ್ರಾಹಕರು 484 ಯುನಿಟ್ ಕತ್ತೆ ಖರೀದಿಸಿದ್ದರು. ಆದರೆ ಸ್ಥಳೀಯ ನಗರಸಭೆಯಿಂದ ಟ್ರೇಡ್ ಲೈಸೆನ್ಸ್ ಪಡೆಯದ ಕಾರಣ ನಗರಸಭೆಯವರು ಜೆನ್ನಿ ಮಿಲ್ಕ್ ಕಂಪನಿಯ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ವಿಷಯ ತಿಳಿದ ಕಂಪನಿಯ ಎಂ.ಡಿ, ವ್ಯವಸ್ಥಾಪಕ ಹಾಗೂ ಸೂಪರ್ ವೈಸರ್ ಸೇರಿದಂತೆ ಇತರರು ತಲೆಮರೆಸಿಕೊಂಡಿದ್ದರು. ರೈತರಿಗೆ ₹10 ಕೋಟಿಗೂ ಹೆಚ್ಚು ಮೋಸ ಮಾಡಿದ ಆರೋಪದ ಮೇರೆಗೆ ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಅ.7ರಂದು ಮೂವರನ್ನು ಬಂಧಿಸಲಾಗಿತ್ತು.

ಬಂಧನ ಕಾರ್ಯಾಚರಣೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಡಿವೈಎಸ್ಪಿ ಟಿ.ಮಂಜುನಾಥ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಪಿಎಸ್‌ಐ ಲಖನ್ ಆರ್.ಮಸಗುಪ್ಪಿ, ಅಶ್ವತ್ಥ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಪಿಎಸ್‍ಐ ಕೆ.ರಾಜಶೇಖರ್, ಬಿ.ರಾಘವೇಂದ್ರ, ಜಾವೇದ್ ಆಶ್ರಫ್, ಶ್ರೀರಾಮರೆಡ್ಡಿ, ಪರಶುನಾಯ್ಕ, ಕೆ.ಕೊಟ್ರೇಶ್, ಪಕ್ಕೀರಪ್ಪ, ಕೊಟ್ರೇಶ್, ಮಲಕಾಜಪ್ಪ, ಶಿವು, ಕೊಟ್ರೇಶ್, ಮಹೇಶ್ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.