ಹೊಸಪೇಟೆ (ವಿಜಯನಗರ): ‘ಡೆಕ್ಕನ್ ಸುಲ್ತಾನಿ, ಹಿರೇಬೆನಕಲ್‍ನ ಪ್ರೀಹಿಸ್ಟಾರಿಕ್ ಸೈಟ್, ಶ್ರೀರಂಗಪಟ್ಟಣದ ಕೋಟೆಗಳು ಹಾಗೂ ಬದಾಮಿ ಐಹೊಳೆಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆದಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭವಾದ ಕರ್ನಾಟಕ ಇತಿಹಾಸ ಅಕಾಡೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಅಕಾಡೆಮಿಯ ಸಂಶೋಧಕರ ಸಂಶೋಧನೆಗಾಗಿ ಪ್ರತಿ ವರ್ಷ ₹5 ಲಕ್ಷ ನೆರವು ನೀಡುವುದಾಗಿ ಪ್ರಕಟಿಸಿದರು.
‘ರಾಜ್ಯದ 25 ಸಾವಿರ ಸ್ಮಾರಕಗಳಲ್ಲಿ 844 ಸ್ಮಾರಕಗಳನ್ನು ಮಾತ್ರ ಅಧಿಸೂಚಿಸಲಾಗಿದೆ. ಇತರ ಸ್ಮಾರಕಗಳನ್ನು ಅಧಿಸೂಚಿಸಬೇಕಿದೆ. ಇತಿಹಾಸ ಅಕಾಡೆಮಿಯವರು ಸ್ಮಾರಕಗಳನ್ನು ಅಧಿಸೂಚಿಸುವ ಕೆಲಸವನ್ನು ಸಿದ್ಧಮಾಡಿಕೊಟ್ಟರೆ ತಾಂತ್ರಿಕ, ಆಡಳಿತ, ಆರ್ಥಿಕ ಬಲ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ’ ಎಂದರು.
‘556 ಸ್ಮಾರಕಗಳನ್ನು ಸ್ಕ್ರೀನಿಂಗ್, ಸ್ಕ್ಯಾನಿಂಗ್ ಹಾಗೂ 3ಡಿ ಡಿಜಿಟಲ್ ತಂತ್ರಾಂಶದ ಮೂಲಕ ದಾಖಲಿಸುವ ಕೆಲಸ ಪ್ರವಾಸೋದ್ಯಮ ಇಲಾಖೆ ಮೂಲಕ ನಡೆದಿದೆ’ ಎಂದು ಹೇಳಿದರು.
ಶಾಸಕ ಎಚ್.ಆರ್.ಗವಿಯಪ್ಪ ಅವರು ‘ಇತಿಹಾಸ ದರ್ಶನ’ ಸಂಪುಟವನ್ನು ಬಿಡುಗಡೆಗೊಳಿಸಿದರು. 12 ವಿದ್ವಾಂಸರಿಗೆ ಅಕಾಡೆಮಿಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.