ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಒಳ ಮೀಸಲಾತಿ ಜಾರಿ ನಿರ್ಣಯ ವಿರುದ್ಧ ಪ್ರತಿಭಟನೆ ಸಾರಿರುವ ತಾಲ್ಲೂಕಿನ ಬಂಜಾರ ಸಮುದಾಯದವರು ವಿವಿಧ ತಾಂಡಾಗಳಲ್ಲಿ ಚುನಾವಣಾ ಬಹಿಷ್ಕಾರದ ಫ್ಲೆಕ್ಸ್ ಅಳವಡಿಸಿದ್ದಾರೆ.
ತಾಲ್ಲೂಕಿನ ತುಂಬಿನಕೇರಿ ದೊಡ್ಡ ತಾಂಡಾ, ಸಣ್ಣ ತಾಂಡಾದಲ್ಲಿ ಶುಕ್ರವಾರ ರಾತ್ರಿ ಹಟ್ಟಿನಾಯ್ಕ, ಕಾರಬಾರಿ ನೇತೃತ್ವದಲ್ಲಿ ತಾಂಡಾದ ಹಿರಿಯರು ಸಭೆ ಸೇರಿ ವಿಧಾನಸಭೆ ಚುನಾವಣೆ ಬಹಿಷ್ಕರಿಸುವ ಫಲಕ ಅಳವಡಿಸಿದ್ದಾರೆ. ಬಾನ್ಯನತಾಂಡ, ಸೋವೇನಹಳ್ಳಿ ತಾಂಡಾ, ದುಂಗಾವತಿ ತಾಂಡಾ, ಭಿತ್ಯಾನತಾಂಡ, ಗೋವಿಂದಪುರಗಳಲ್ಲಿ ಇದೇ ರೀತಿಯ ಆಕ್ರೋಶ ವ್ಯಕ್ತವಾಗಿದೆ.
ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಡಾ. ಎಲ್.ಪಿ.ನಾಯ್ಕ ಕಠಾರಿ ಮಾತನಾಡಿ, ಅವೈಜ್ಞಾನಿಕ ಒಳ ಮೀಸಲಾತಿ ವರದಿ ಜಾರಿಯಿಂದ ಲಂಬಾಣಿ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದ್ದರೂ ರಾಜಕೀಯ ಪಕ್ಷಗಳ ಯಾವ ನಾಯಕರು ನಮ್ಮ ಪರವಾಗಿ ಧ್ವನಿ ಎತ್ತಿಲ್ಲ. ಇದನ್ನು ಖಂಡಿಸಿ ಚುನಾವಣಾ ಬಹಿಷ್ಕಾರದ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಹೇಳಿದರು.
‘ಪರಿಶಿಷ್ಟ ಸಮುದಾಯಗಳ ಜನರೆಲ್ಲ ಸಹೋದರರಂತೆ ಬಾಳುತ್ತಿದ್ದೆವು. ಒಳ ಮೀಸಲಾತಿ ಜಾರಿ ಮೂಲಕ ಸರ್ಕಾರ ನಮ್ಮ ನಡುವೆ ವೈಷಮ್ಯ ಉಂಟು ಮಾಡಿದೆ. ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳ ಬದುಕು ನಾಶಪಡಿಸುವ ನಿರ್ಣಯವನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತೇವೆ’ ಎಂದು ಭೀತ್ಯಾನತಾಂಡದ ಯುವ ಮುಖಂಡ ಆರ್.ರೆಡ್ಡಿನಾಯ್ಕ ತಿಳಿಸಿದರು.
‘ಲಂಬಾಣಿಗರ ಸಂವಿಧಾನಿಕ ಮೀಸಲಾತಿ ಹಕ್ಕು ಕಸಿದಿರುವುದು ತೀವ್ರ ನೋವಾಗಿದೆ. ಚುನಾವಣೆಯಲ್ಲಿ ನಮ್ಮ ತಾಂಡಾಕ್ಕೆ ಯಾವೊಬ್ಬ ರಾಜಕಾರಣಿ ಪ್ರಚಾರಕ್ಕೆ ಬಿಟ್ಟುಕೊಳ್ಳದಂತೆ ಮುಳ್ಳಿನ ಬೇಲಿ ಹಾಕುತ್ತೇವೆ’ ಎಂದು ಗೋವಿಂದಪುರ ತಾಂಡಾದ ಶೇಖರನಾಯ್ಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.