ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗದ ಜನತಾ ಪ್ಲಾಟ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳು, ಅಂಗಡಿಗಳು ಹಾಗೂ ಕಟ್ಟಡಗಳನ್ನು ಶುಕ್ರವಾರ ಬೆಳಿಗ್ಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮ) ನೇತೃತ್ವದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದ್ದು, ಪೊಲೀಸ್, ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಜನತಾ ಪ್ಲಾಟ್ ಪ್ರದೇಶದಲ್ಲಿನ ಹೋಂ ಸ್ಟೇಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಈಗಾಗಲೇ ಮುಚ್ಚಿಸಲಾಗಿದೆ. ಕೆಲವು ಅಂಗಡಿಗಳನ್ನು ಸಹ ಮುಚ್ಚಿಸಲಾಗಿತ್ತು. ಆದರೆ ಕೆಲವು ಕಡೆ ನಿಗದಿತ ಸ್ಥಳಕ್ಕಿಂತ ಹೆಚ್ಚುವರಿ ಸ್ಥಳವನ್ನು ಆಕ್ರಮಿಸಿಕೊಂಡು ಶೆಡ್, ಅಂಗಡಿ ನಿರ್ಮಿಸಿಕೊಂಡಿದ್ದು ಗಮನಕ್ಕೆ ಬಂದಿತ್ತು. ಜುಲೈ 11ರಂದು ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ ಇಂತಹ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ನೋಟಿಸ್ ನೀಡಿದ್ದು ವಿಳಂಬವಾಗಿ: ಪ್ರಾಧಿಕಾರದ ನಿರ್ಧಾರದಂತೆ ಅಕ್ರಮ ಕಟ್ಟಡ ನಿರ್ಮಿಸಿಕೊಂಡವರಿಗೆ ಮೊದಲಾಗಿಯೇ ನೋಟಿಸ್ ನೀಡಬೇಕಿತ್ತು, ಆದರೆ ನೋಟಿಸ್ ನೀಡಿದ್ದು ಅ.24ರಂದು. ಹೀಗಾಗಿ ಕಟ್ಟಡ ತೆರವಿಗೆ ಸಮಯ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು. ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ವಿನಂತಿಸಿದ್ದರು. ಆದರೆ ತಮ್ಮ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ಇರುವ ಕಾರಣ ತಕ್ಷಣ ಅಕ್ರಮ ಕಟ್ಟಡ ತೆರವುಗೊಳಿಸಲೇಬೇಕಿದೆ ಎಂದು ಹೇಳಿದ ಅಧಿಕಾರಿಗಳು ಶಾಸಕರ ಮನವೊಲಿಸಿ, ಶುಕ್ರವಾರ ಬೆಳಿಗ್ಗೆಯಿಂದಲೇ ತೆರವು ಕಾರ್ಯಾಚರಣೆ ಆರಂಭಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.