ಹೊಸಪೇಟೆ (ವಿಜಯನಗರ): ನಿವೇಶನ ಮಾರಾಟಕ್ಕೆ ₹16.28 ಲಕ್ಷ ಪಡೆದು ವಂಚಿಸಿದ ದೂರಿನ ಮೇರೆಗೆ ನಗರಸಭೆಯ ಮಾಜಿ ಸದಸ್ಯ ಡಿ. ವೇಣುಗೋಪಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಂಚನೆಗೆ ಸಂಬಂಧಿಸಿದಂತೆ ವೇಣುಗೋಪಾಲ್ ಹಾಗೂ ಅವರ ಪತ್ನಿ ಎಲ್. ಭಾಗ್ಯ ಡಿ. ವೇಣುಗೋಪಾಲ್ ವಿರುದ್ಧ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಆ. 27ರಂದು ಪ್ರಕರಣ ದಾಖಲಾಗಿತ್ತು. ರಾಣಿಪೇಟೆಯ ಸಂತೋಷ್ ಕುದುರೆ ಮೇಟಿ ಎಂಬುವರು ಕೊಟ್ಟಿರುವ ದೂರಿನ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ರಾತ್ರಿ ಪೊಲೀಸರು ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆದಿದ್ದರು. ‘ಪ್ರಕರಣದ ತನಿಖೆ ಮುಂದುವರೆದಿದೆ’ ಎಂದು ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:‘ನಾನು ನಿವೇಶನ ಖರೀದಿಸಲು ಓಡಾಡುತ್ತಿರುವಾಗ 2000ನೇ ಇಸ್ವಿಯಲ್ಲಿ ಎಲ್. ಭಾಗ್ಯ ಮತ್ತು ಡಿ. ವೇಣುಗೋಪಾಲ್ ಎಂಬುವರು ಶಿರಸಿನಕಲ್ಲು ಪ್ರದೇಶದಲ್ಲಿ ತಮ್ಮ ಹೆಸರಿನಲ್ಲಿ ನಿವೇಶನ ಇರುವುದಾಗಿ ತಿಳಿಸಿ, ತೋರಿಸಿದರು. ಸ್ನೇಹಿತರೊಂದಿಗೆ ಹೋಗಿ ಖರೀದಿಗೆ ಸಮ್ಮತಿ ಸೂಚಿಸಿ, ₹16 ಲಕ್ಷಕ್ಕೆ ಖರೀದಿಸಲು ಮಾತುಕತೆ ಅಂತಿಮಗೊಳಿಸಿದೆ. ಅದೇ ದಿನ ಭಾಗ್ಯ ಅವರ ಹೆಸರಿನ ಬ್ಯಾಂಕ್ ಖಾತೆಗೆ ₹2 ಲಕ್ಷ ಹಾಕಿದೆ. 2021ರ ಜುಲೈ 17ರ ವರೆಗೆ ಹಂತ ಹಂತವಾಗಿ ಭಾಗ್ಯ ಅವರ ಬ್ಯಾಂಕ್ ಖಾತೆಗೆ ಮಿಕ್ಕುಳಿದ ಹಣ ಜಮೆ ಮಾಡಿದೆ’ ಎಂದು ಸಂತೋಷ್ ದೂರಿನಲ್ಲಿ ತಿಳಿಸಿದ್ದಾರೆ.
‘ನಾನೇ ನಗರಸಭೆ ಮಾಜಿ ಸದಸ್ಯನಾಗಿದ್ದು, ನಗರಸಭೆಯಲ್ಲಿ ಮ್ಯುಟೇಶನ್ ಮಾಡಿಸಿಕೊಡುತ್ತೇನೆಂದು ₹28 ಸಾವಿರ ಪಡೆದು, ಅರ್ಜಿಗಳ ಮೇಲೆ ನನ್ನ ಸಹಿ ಪಡೆದರು. ನಿವೇಶನ ಸರ್ಕಾರಿ ಸ್ವತ್ತು ಎಂಬುದು ನಂತರ ನನಗೆ ಗೊತ್ತಾಯಿತು. ನೋಂದಣಿ ರದ್ದುಪಡಿಸಿ ನನ್ನ ಹಣ ವಾಪಸ್ ನೀಡಬೇಕೆಂದು ಕೇಳಿದೆ. ‘ನಿನಗೆ ಹಣ ಕೊಡುವುದಿಲ್ಲ. ನನ್ನ ಹೆಂಡತಿ ಮೂಲಕ ನಿನ್ನ ಮೇಲೆ ಜಾತಿ ನಿಂದನೆ ಕೇಸ್ ಹಾಕಿಸಿ ಕೋರ್ಟ್‌ಗೆ ಅಲೆದಾಡುವಂತೆ ಮಾಡುತ್ತೇನೆ’ ಎಂದು ಹೇಳಿ ವೇಣುಗೋಪಾಲ್ ಪ್ರಾಣ ಬೆದರಿಕೆ ಹಾಕಿದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವತ್ತು ನನಗೆ ಮಾರಾಟ ಮಾಡಿ ಮೋಸ ಮಾಡಿದ್ದಾರೆ’ ಎಂದು ಮೇಟಿ ದೂರಿನಲ್ಲಿ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.